Tuesday, June 3, 2008

ಅದು ನಿನ್ನ ಜೋತೇನೆ ಬಾಳ್ತಿನಿ....


ನಾನು ನಿನ್ನ ಬಾಳ್ ಹಚ್ಕೊಂಡಿದ್ಯ. ಆದ್ರ ನೀನು ಈ ರೀತಿ ಮಾಡ್ತಿ ಅಂಥ ಅಂದ್ಕೊಂಡಿರಲಿಲ್ಲ. ನೀನು ನನಗ ಮೋಸ ಮಾಡ್ಲಿಲ್ಲ. ಕೊನೆ ಗಳಿಗೆಯಲ್ಲಿ ಪ್ರಿತಿನು ಮಾಡಲಿಲ್ಲ.



ನೀನು ಮಾಡಿರೋ ಸಹಾಯಕ್ಕೆ ನಾನು ಏನಂತ ವರ್ಣಿಸಲಿ, ಹೆಗಂಥ ಕೃತಜ್ಞತೆ ಸಲ್ಲಿಸಲಿ, ಯಾವ ರೀತಿ ಋಣ ತಿರಿಸ್ಲಿ ಅನ್ನದ ನನಗ ತಿಳಿದಂಗ ಆಗೈತಿ.



ನನಗ ತಂದೆ ತಾಯಿ ಇಲ್ಲ ಅಂಥ ಹೇಳ್ದಾಗ ನಿನ್ನ ಮನಸ್ಸಿಗೂ ನೋವಾತು ಅಂಥ ಹೇಳಿದಿ. ಕಾಲೇಜಿಗೆ ಸೇರಾಕ ರೊಕ್ಕ ಇಲ್ಲ ಅಂದಾಗ ನೀನ ಅದನ್ನ ಕೊಟ್ಟಿ. ಅಷ್ಟೆ ಅಲ್ಲ, ಹಾಸ್ಟೆಲಿಗೆ ಸೇರಾಕನೂ ನೀನೆ ಹಣ ತುಂಬಿದಿ.



ಅವಾಗವಾಗ ನನ್ನ ಖರ್ಚಿಗೂ ಹಣ ಕೊಡ್ತಿದ್ದಿ. ನಾನು ನಿನಗೆನಾಗಬೇಕು, ಸಂಬಂಧಿನಾ, ಬಂದುವಾ ಅಥವಾ ನನ್ನ ಬಾಳನ್ನು ಹಂಚಿಕೊಳ್ಳುವವನಾ ಏನು? ಇದ್ಯಾವುದು ಅಲ್ಲ. ಆದರೆ ನನ್ನ ಮೇಲೆ ಏಕೆ ಇಸ್ತೊಂದು ಅಕ್ಕರೆ, ಸ್ನೇಹ, ವಿಶ್ವಾಸ ನಿನಗೆ. ಅದು ನನಗೂ ತಿಳಿಲಿಲ್ಲಾ.ಹಿಂಗ ನಾನು ಬಾಳ್ ಯೋಚನೆ ಮಾಡ್ತಾ ಇದ್ದೆ.



ಕೆಲವು ಸಲ ನನ್ನ ಮನಸನ್ಯಾನ ಮಾತು, ಭಾವನೆನ ನಿನ್ನ ಮುಂದ ಹೇಳಿಕೊಳ್ಳೋಣ ಅಂತಾ ಬಾಳ್ ಸಲಾ ಪ್ರಯತ್ನ ಪಟ್ಯಾ ಆದರೆ ನಿನ್ನ ಮುಂದೆ ನಾನು ನಿಂತರೆ ಸಾಕು ಮಾತೆ ಹೊರಗ ಬರ್ತಿರ್ಲಿಲ್ಲ. ಹಿಂಗಾಗಿ ನನ್ನ ಮನಸ್ಸಿನ ಮಾತು ಭಾವನೆ ಹಂಗ ಮರೆ ಆಗಿ ಹೋದ್ವು. ಅದನ್ನ ನನಗ ಕೊನೆತನಕೂ ಹೇಳದಂಗಾತು. ಈಗೂ ಅದು ಹಾಗೆ ಉಳ್ಕೊಂತು.



ಇವತ್ತು ನಾನು ಈ ಊರಿಗೆ ದೊಡ್ಡ ಡಾಕ್ಟರ್ ಆಗೆನಿ. ಇದಕ್ಕೆ ನೀನೆ ಕಾರಣ. ನಾನ್ ಇಷ್ಟು ಸಾಧನೆ ಮಾಡಾಕ್ ನಿನ್ನ ಸ್ಫೂರ್ತಿ, ಪ್ರೋತ್ಸಾಹ, ನೀನು ನಂಗ ತುಂಬಿದ ಧೈರ್ಯಗಳೇ ಕಾರಣ.



'ನೀನು ಒಂಟಿಯಲ್ಲಾ. ನಿನ್ನ ಜೊತೆಗೆ ನಾನು ಅದೀನಿ. ನೀನು ಧೈರ್ಯವಾಗಿರು' ಅಂಥಾ ನೀನು ನಂಗ ಯಾವಾಗಲೂ ಹೇಳ್ತಿದ್ದಿ. ಆದ್ರ ಇವತ್ತು ಆ ಒಂಟಿತನ ಮತ್ತೆ ನನ್ನನ್ನಾ ಆವರಿಸಿಕೊಂಡಿದೆ ಅಂಥಾ ಅನಿಸ್ತಿದೆ. ಯಾಕೆ ಗೊತ್ತಾ ಇವತ್ತಿಗೆ ನೀನು ನನ್ನ ಕಣ್ಣ ಮುಂದೇನೆ ಇಲ್ಲ!



ನನ್ನನ್ನಾ, ಈ ಲೋಕಾನ ಬಿಟ್ಟು ಹೋಗಿ ಇವತ್ತಿಗೆ ನೀನು ಒಂದ್ ವರ್ಷ ಆತು.



ಆವತ್ತು ಒಂದ್ ದಿನ ಆಕ್ಸಿಡೆಂಟ್ ಆಗಿ ನೀನು ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಾ ಆಸ್ಪತ್ರೆಲಿ ಇದ್ದೆ. ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ ಅಂಥಾ ಅಲ್ಲೇ ನಿನ್ನ ಪ್ರಾನಾನೂ ಬಿಟ್ಟೆ.



ನನಗಿನ್ನೂ ಆ ವಿಚಾರ ತಿಳಿದಿರಲಿಲ್ಲ. ಯಾಕಂದ್ರ ನಾನು ಆವಾಗ ನಿನ್ನ ಹತ್ರ ಇದ್ದಿರಲಿಲ್ಲ. ಹೆಚ್ಚಿನ ಸ್ಟಡಿಗಂತ ನೀನೆ ನನ್ನ ಫಾರಿನ್ ಗೆ ಕಳಿಸಿದ್ದಿ. ಹಿಂಗಾಗಿ ಕೊನೆ ಗಳಿಗೆಯಲ್ಲೂ ನಿನ್ನ ಮುಖಾನೂ ನಾನು ನೋಡಾಕ ಆಗಲಿಲ್ಲಾ. ನಾನು ತುಂಬಾ ನತದ್ರುಷ್ಟಳು. ನಾನು ನಿನ್ನ ಮುಂದ ಎಲ್ಲ ವಿಸ್ಯಾನು ಹೇಳಬೇಕಿತ್ತು. ನಾನು ನಿನ್ನ ತುಂಬಾ ಪ್ರೀತಿ ಮಾಡ್ತೀನಿ...



ಆದ್ರೆ ಏನು ಮಾಡ್ಲಿ, ಇವತ್ತು ನೀನು ನನ್ನ ಜೊತೆ ಇಲ್ದೆ ಒಬ್ಬಳೇ ನೋವು, ಸಂಕಟ, ವೇದನೆ ಅನುಭವಿಸ್ತಾ ಇದೀನಿ. ನೀನು ಇದ್ದಿದ್ರೆ ನಾನು ತುಂಬಾ ಸಂತೋಷ ಪಡ್ತಾ ಇದ್ದೆ ಈಗ ಆ ಸಂತೋಶಾನು ನಿನ್ನ ಜೊತೆಲೆ ಹೊರಟು ಹೊಗಿದೆ. ಈಗ ಮತ್ತೆ ಒಂಟಿತನ ಮತ್ತೆ ನನ್ನ ಕಾಡ್ತಾ ಇದೆ.



ಮುಂದಿನ ಒಂದ್ ಜನ್ಮಾ ಇದ್ರೆ ಅದು ನಿನ್ನ ಜೋತೇನೆ ಬಾಳ್ತಿನಿ....

Saturday, March 22, 2008

ಅವನು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ


ತನ್ನ ಸ್ವಂತ ಊರಿಂದ ಕಾಲೇಜಿಗೆ ಸುಮಾರು ಮೈಲಿ ನಡೆಯಬೇಕಾಗಿದ್ದರಿಂದ, ಅಜಿತ್ ತನ್ನ ದೊಡ್ಡಮ್ಮನ ಊರಿಗೆ ತೆರಳಿದ. ಅವನು ತನ್ನ ತಂದೆ-ತಾಯಿಗೆ ನಾಲ್ಕನೆ ಮಗ. ಅವರಿಗೆ ಹೆಣ್ಣು ಮಕ್ಕಳಿರಲಿಲ್ಲ. ಎಲ್ಲರೂ ಗಂಡು ಮಕ್ಕಳೇ. ಸಾಮಾನ್ಯವಾಗಿ ಕೊನೆಯ ಮಗ ಅಂದ್ರೆ, ಎಲ್ಲರಿಗಿಂತಲೂ ಅವರ ಮೇಲೆ ಪ್ರೀತಿ ಹೆಚ್ಚಾಗಿರುತ್ತೆ. ಅದು ಸ್ವಾಭಾವಿಕ ಕೂಡ. ಅಂಥ ಪ್ರೀತಿನ ಕೆಲವರು ದುರುಪಯೋಗ ಮಾಡಿಕೊಳ್ಳುವವರು ಇದಾರೆ. ಆದರೆ ಅಜಿತ ಇದಕ್ಕೆ ಅಪವಾದವಾಗಿದ್ದ.

ಮನೆಯಲ್ಲಿ ತಂದೆ ತಾಯಿ ಎಂದರೆ ಅವನಿಗೆ ಅಚ್ಚು ಮೆಚ್ಚು. ಅವರಿಗೂ ಕೂಡ ಇವನೆಂದರೆ ಎಲ್ಲಿಲ್ಲದ ಪ್ರೀತಿ, ಅಷ್ಟೇ ವಾತ್ಸಲ್ಯ ಕೂಡ. ಮನೆಯಲ್ಲಿ ಅಷ್ಟೇ ಅಲ್ಲಾ, ಶಾಲೆಯಲ್ಲಿಯೂ ಇವನು ನಂ.೧. ಮಾಸ್ತರು ಇವನ ವಿನಯತೆ ಹಾಗೂ ಮುಗ್ಧತೆಯನ್ನು ಕಂಡು ಮೆಚ್ಚಿಕೊಂಡಿದ್ದರು. ಮಾತಿನಲ್ಲೂ ಅಜಿತ್ ಎಂಥವರನ್ನೂ ಗೆಲ್ಲುವವನಾಗಿದ್ದ. ತನ್ನ ಸ್ವಂತ ಊರಿನಲ್ಲಿ ಇವನ ಮಾತಿಗೆ, ನಡತೆಗೆ ಮರುಳಾಗದವರು ಇರಲೇ ಇಲ್ಲ ಎನ್ನಿ.

ಗುಂಗುರ ಕೂದಲು, ಧ್ರುಡವಾದ ಮೈಕಟ್ಟು, ಈಗಿನಂತೆ ಜೀನ್ಸ್ ಫ್ಯಾಂಟ್ ಧರಿಸಿ ಹೆಚ್ಚು ಸ್ಟೈಲ್ ಮಾಡದೆ, ತುಂಬಾ ಸರಳವಾದ ಉಡಿಗೆ ತೊಡುತ್ತಿದ್ದ. ಒಂದರ್ಥದಲ್ಲಿ ಸಾಂಪ್ರದಾಯಿಕ ಮನುಷ್ಯ. ಅದು ಕೇವಲ ಉಡಿಗೆ ತೊಡುಗೆಗಳಲ್ಲಿ ಮಾತ್ರ ಇದ್ದಿರಲಿಲ್ಲ. ಅವನು ಮಾತಿನಲ್ಲಿ, ನಡುವಳಿಕೆಯಲ್ಲೂ ರೂಡಿಗತವಾಗಿ ಬಂದಿತ್ತು.

ತಾನು ಹೆಚ್ಚು ಕಲಿಯಬೇಕು, ಜೀವನದಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಅವನಲ್ಲಿ ಬೆರೂರಿತ್ತು. ವಿಚಿತ್ರ ಅಂದ್ರೆ ಅವನ ತಂದೆಯೇನೂ ಕಡಿಮೆ ಇರಲಿಲ್ಲ. ನೂರಾರು ಎಕರೆ ಹೊಲ ಇತ್ತು. ಪ್ರತಿ ವರ್ಷ ಅದರಿಂದ ಲಕ್ಷಾಂತರ ರು. ಫಸಲು ಬೆಳಿತಾ ಇದ್ರು. ಆದರು ಅವನ ತಂದೆ ಮಾಡಿದ ಆಸ್ತಿ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ, ಓದಬೇಕು ಎಂಬ ದೊಡ್ಡ ಹಂಬಲ ಹಾಗೂ ಚಲವನ್ನಿತ್ತುಕೊಂಡು ತನ್ನ ದೊಡ್ಡಮ್ಮನ ಊರಿನತ್ತ ಚಿತ್ತ ಹರಿಸಿದ.

ಅಜಿತ್ ಅವರ ದೊಡ್ಡಮ್ಮನ ಊರಿಗೆ ಬಂದು ಇನ್ನೂ ಒಂದು ತಿಂಗಳಾಗಿರಲಿಲ್ಲ. ಆ ಮನೆಯ ಸದಸ್ಯರೆಲ್ಲರ ಮನಸ್ಸನ್ನು ತನ್ನ ಮುತ್ತಿನಂಥ ಮಾತುಗಳಿಂದ ಹಾಗೂ ಕೆಲಸದಿಂದ ಮಂತ್ರ ಮುಗ್ಧರನ್ನಾಗಿ ಮಾಡಿದ್ದ. ನಾನು ಕಾಲೇಜಿಗೆ ಹೋಗುತ್ತಿದ್ದೇನೆ ಎನ್ನುವ ಒಂದು ಚೂರು ಅಹಂಕಾರವಿಲ್ಲದೆ, ಅವರ ದೊಡ್ಡಮ್ಮನ ಮನೆಯ ದನದ ಕೊಟ್ಟಿಗೆಯಲ್ಲಿ ಶೆಗಣಿಯನ್ನೂ ಬಳಿತ್ತಿದ್ದ. ನಿಜಕ್ಕೂ ಇವನನ್ನು ಹಡೆದವರು ಪುಣ್ಯವಂತರು ಎಂದು ಜನಾ ಕೂಡ ಆಡಿಕೊಳುತ್ತಿದ್ರು.

ಅಜಿತನಿಗೆ ವಾಣಿಜ್ಯದಲ್ಲಿ ತುಂಬಾ ಆಸಕ್ತಿ ಇದ್ದಿದ್ದರಿಂದ ಬಿ.ಕಾಂ ಗೆ ಅಡ್ಮಿಶನ್ ಮಾಡಿಸಿದ್ದ. ಮೊದಲ ವರ್ಷ ಚೆನ್ನಾಗಿ ಸ್ಕೋರ್ ಮಾಡಿ, ಫರ್ಸ್ಟ್ ಕ್ಲಾಸಿನಲ್ಲಿ ಪಾಸಾದ. ಹಾಗೂ ಹೀಗೂ ಮಾಡಿ ಮೊದಲ ವರ್ಷ ಮುಗಿಸಿದ. ಅಷ್ಟೊತ್ತಿಗಾಗಲೇ ಅವನಿಗೆ ಕಾಲೇಜಿನಲ್ಲೂ ಸಾಕಷ್ಟು ಮಂದಿ ಸ್ನೇಹಿತರಾಗಿ ಬಿಟ್ಟಿದ್ದರು.

ಅವರು ಎಷ್ಟೊಂದು ಅವನನ್ನು ಹಚ್ಚಿಕೊಂಡಿದ್ದರು ಅಂದ್ರೆ ಕೆಲವೊಂದು ಸಲ ಅಜಿತ ಕಾಲೇಜಿಗೆ ಹೋಗದಿದ್ದರೆ ಅವನ ಸ್ನೇಹಿತರು ಮನೆಗೆ ಬಂದು ವಿಚಾರಿಸುತ್ತಿದ್ದರು. ಆ ಮಟ್ಟಿಗೆ ಅವನ ಸ್ನೇಹಕ್ಕೆ ಅಂಟಿಕೊಂಡಿದ್ದರು.

ಆಗ ತಾನೆ ಅಜಿತ್ ತನ್ನ ಎರಡನೆ ವರ್ಷದ ಬಿ.ಕಾಂ ಪರೀಕ್ಷೆ ಮುಗಿಸಿದ್ದ. ತನ್ನೂರಿಗೆ ಹೋಗಿ ಬಂದ ಮೇಲೆ ಫೈನಲ್ ಡಿಗ್ರಿಗೆ ಕೋಚ್ ತೆಗೆದುಕೊಂಡರಾಯಿತು ಅಂಥ ಪ್ಲಾನ್ ಮಾಡಿಕೊಂಡಿದ್ದ. ಆದರೆ ಅವನ ಸ್ನೇಹಿತರು ಅವನನ್ನು ಊರಿಗೆ ಕಳುಹಿಸಲು ಇಷ್ಟವಿರಲಿಲ್ಲ. ಹೀಗಾಗಿ ಅಜಿತ ತನ್ನ ಅಕ್ಕನ (ತನ್ನ ದೊಡ್ಡಮ್ಮನ ಮಗಳು) ಊರಿಗೆ ಹೋಗೋಣ ಅಂದುಕೊಂಡು, ತನ್ನ ಸ್ನೇಹಿತರೊಂದಿಗೆ ಅಲ್ಲಿಗೆ ಹೋದ. ಅಂದು ತನ್ನ ಅಕ್ಕನ ಮನೆಗೆ ಹೋದ ಅಜಿತ ಅಂದು ಎಲ್ಲರೊಂದಿಗೆ ಸಂತಸದಿಂದ ಕಾಲ ಕಳೆದ. ಅವನ ಸ್ನೇಹಿತರೂ ಅವನಿಗೆ ಒಳ್ಳೆ ಕಂಪನಿ ಕೊಟ್ರು.

ಮಾರುದಿನ ಬೆಳಗ್ಗೆ ಸರಿಸುಮಾರು ಹತ್ತು ಗಂಟೆಯಾಗಿತ್ತು. ಅವನ ದೊಡ್ಡಮ್ಮನ ಮನೆಯ ಫೋನ್ ರಿಂಗ್ ಆಯಿತು. ಫೋನ್ ರಿಸಿವ್ ಮಾಡಿದ ಅವರಣ್ಣ (ದೊಡ್ಡಮ್ಮನ ಮಗ) ಏನೂ ತೋಚದಂತೆ ದಿಗ್ಭ್ರಾಂತನಾಗಿ ಹಾಗೆ ನಿಂತು ಬಿಟ್ಟ. ಮನೆಯವರಿಗೆಲ್ಲ ತುಂಬಾ ಗಾಬರಿಯಿಂದ "ಏನಾಯಿತು" ಅಂಥ ಕೇಳಿದಾಗ ಅವರಣ್ಣ ಹೇಳಿದ್ದೇನು ಗೊತ್ತೆ ' ಅಜಿತ ಈಜಲು ಹೋಗಿ ಹೊಳ್ಯಾಗ ಬಿದ್ದು ಸತ್ತು ಹೊಗ್ಯಾನಂಥ. ಅವನ ಹೆಣ ಇನ್ನೂ ಹುಡುಕ್ತಾ ಇದಾರಂತೆ' ಅಂದಾಗ. ಮನೆಯಲ್ಲಿ ಶ್ಮಶಾನ ಮೌನ ಆವರಿಸಿತ್ತು.
ಇದಕ್ಕೆ ಅನ್ನೋದು ವಿಧಿ ಆಟ ಅಂಥ. ದೇವರು ತನ್ನ ಕಡೆ ಯಾವಾಗಲು ಒಳ್ಳೆಯವರನ್ನೇ ಕರೆದುಕೊಳ್ಳುತ್ತಾನೆ ಅಂತ ಊರಿನ ಜನಾ ಎಲ್ಲ ಕಣ್ಣಿರು ಹಾಕ ತೊಡಗಿದರು.

ಆ ಸಾವು ಕೂಡ ಅವನನ್ನು ತನ್ನತ್ತ ಕರೆದುಕೊಳ್ಳುವಾಗಲೂ, ಅಜಿತನಿಗೆ ಈಜು ಬಾರದಂತೆ ಮಾಡಿ ನದಿಯನ್ನು ಸಾವಿನ ಕುಣಿಕೆಯನ್ನಾಗಿಸಿ, ತಿರುಗುಣಿ ಎಂಬ ಪಾಶಕ್ಕೆ ಸಿಕ್ಕಿ ಹಾಕಿಸಿ ಅವನ ಪ್ರಾಣ ಹಿಂಡಿಕೊಂಡಿತು.

ಬಿಟ್ಟು ಹೋಗ್ತಾನೆ ಅಂದಾಗಲೇ ತಾಯಿ ಹೃದಯ ವಿಲಿವಿಲಿ ಅಂತಿತ್ತು. ಇನ್ನು ಮಗ ನಮ್ಮನ್ನೆಲ್ಲಾ ಬಿಟ್ಟು ಶಾಶ್ವತವಾಗಿ ಕಣ್ ಮುಚ್ಚಿಕೊಂಡಿದ್ದಾನೆ ಎಂಬ ವಿಷಯ ತಿಳಿದ ತಾಯಿ ಅದೆಷ್ಟು ನೋವು, ವೇದನೆ, ಸಂಕಟ ಪಟ್ಟಿರಬೇಡ ನೀವೇ ಊಹಿಸಿ.
ಎರಡು ದಿನಗಳಾದ ನಂತರ ಅಜಿತನ ಹೆಣ ಸಿಕ್ಕಿತು. ಅವನ ತಂದೆ ತಾಯಿ, ಬಂಧು ಬಳಗ, ಸ್ನೇಹಿತರೆಲ್ಲ ಅವನ ಅಗಲುವಿಕೆಯಿಂದ ಸಾಕಷ್ಟು ನೊಂದರು. ಇಂತ ವ್ಯಕ್ತಿಯೊಬ್ಬ ನೂರುಕಾಲ ಬಾಳಬೇಕಿತ್ತು ಎಂಬುದು ಅವನ ಬಗ್ಗೆ ತಿಳಿದುಕೊಂಡ ಜನರೆಲ್ಲ ಮಾತನಾದಿಕೊಲ್ಲುತ್ತಲೇ ಇದ್ದರು.


ನಿಜ ಅಜಿತ ಸಾವಿನಲ್ಲೂ 'ಅಜಿತ' ನಾಗಬೇಕಿತ್ತು. ಆದರೆ ವಿಧಿ ಬರಹದ ಮುಂದೆ ಯಾರು ದೊಡ್ಡವರಲ್ಲ....


ಇನ್ನೊಂದು ವಿಷಯ ಗೊತ್ತಾ ಈ ಅಜಿತ ಬೇರೆ ಯಾರು ಅಲ್ಲ ನನ್ನ ಸ್ವಂತ ಚಿಕ್ಕಪ್ಪ........................


ಅವನು ತೀರಿಹೋದಾಗ ನನಗೆ ೧೦ ವರ್ಷ. ಇಂದಿಗೆ ಅವನು ಸತ್ತು ಸುಮಾರು ೧೫ ವರ್ಷಗಳೇ ಗತಿಸಿದವು. ಯಾಕೋ ಅವನದು ನೆನಪಾಯ್ತು ಅದಕ್ಕೆ ಇದನ್ನು ಮನಸ್ಸು ಬಿಚ್ಚಿ ಬರೆದೆ.

Wednesday, March 19, 2008

ಮರೆಯಾದರೂ 'ಮರೆಯದವರು'


'ಅಗಲುವಿಕೆ' ಎಂಥ ಮನುಷ್ಯನನ್ನು ಭಾವುಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಅದು ನನ್ನ ಅನುಭವಕ್ಕೂ ಹೊರತಾಗಿಲ್ಲ. ಏನೂ ಅರಿಯದ ವಯಸ್ಸಿನಲ್ಲಿ ಸಂತಸದಿಂದ ಕೂಡಿ ಆಡಿದ ಗೆಲೆಯ್ ಒಮ್ಮೆಲೇ ಬಿಟ್ಟುಹೊದಾಗ...

ಮನಸ್ಸಿಗೆ ಏನೋ ಒಂದ ಥರಾ ಹೇಳಿಕೊಳ್ಳದ ವೇದನೆ.

ಅಂಥ ಸ್ನೇಹಿತರನ್ನು ಎಸೆಸೆಲ್ಸಿ ಆದ ಮೇಲೆ ಅನಿವಾರ್ಯವಾಗಿ ಬಿಡಬೇಕಾಯಿತು. ಚಿಕ್ಕವನಿರುವಾಗ ಅವರೊಂದಿಗೆ ಆಡಿದ ಮನ್ನಾಟ, ಚಿನ್ನಿ ದಾಂಡು, ಕಣ್ಣ ಮುಚ್ಚಾಲೆ ಆಟಗಳು ಇನ್ನೂ ಕೂಡ ಕಣ್ಣು ಮುಂದೆ ಕಟ್ಟಿದಂತಿದೆ. ಇದು ನನ್ನ ಸ್ನೇಹಿತರ ಅಗಲುವಿಕೆ ಆಯ್ತು. ಬಿಳ್ಕೊಡುಗೆ ಸಮಾರಂಭದಲ್ಲಿ ಅವರೊಟ್ಟಿಗೆ ಅತ್ತ ನೆನಪು ಕೂಡ ಈಗಲೂ ನನ್ನನ್ನು ಯಾವುದೊ ಲೋಕಕ್ಕೆ ಕೊಂಡೊಯ್ಯುತ್ತದೆ.

ಇಂದಿಗೆ ಸರಿಯಾಗಿ ಹತ್ತು ವರ್ಷಗಳೇ ಕಳೆದವು. ಆ ಬಾಲ್ಯದ ಜೀವನವನ್ನು ಸಾಗಿ ಬಂದು. ಈಗ ಉಳಿದಿರುವುದು ಅದರ ನೆನಪು ಮಾತ್ರ. ಆದರೆ ಆ ನನ್ನ ಸ್ನೇಹಿತರು ಬೇರೆ ಬೇರೆ ಕಡೆ ಇದ್ದರೆ. ಅದ್ರಲ್ಲಿ ಕೆಲವರು ಮಾತ್ರ ಇದುವರೆಗೆ ಕಾಂಟಾಕ್ಟ್ ನಲ್ಲಿ ಇದಾರೆ. ಉಳಿದವರು ಮರೆಯಾದರು, ನನ್ನಿಂದ ಮರೆಯಲಾರದಷ್ಟು ನೆನಪುಗಳನ್ನು ಮನಸಿನ ಮರೆಯಲ್ಲಿ ಬಿತ್ತಿ ಹೋಗಿದ್ದಾರೆ. ಅವರು ಎಲ್ಲಿದ್ದರೂ ಚೆನ್ನಾಗಿರಲಿ.
ಇನ್ನೊಮ್ಮೆ ನನ್ನ ಬಾಲ್ಯದ ಸ್ನೇಹಿತರನ್ನ ಒಟ್ಟಿಗೆ ಸೇರಿಸಿ ಭೇಟಿ ಆಗೋಣ ಅಂಥ ನಾನು ನನಗೆ ಸಿಕ್ಕ ಸ್ನೇಹಿತರಿಗೆಲ್ಲ ಹೇಳ್ತಾನೆ ಇದೇನೇ. ಆದರೆ ಆ ಕಾಲ ಯಾವಾಗ ಕೂಡಿ ಬರುತ್ತೋ?

ನನ್ನ ಬಾಲ್ಯದ ಮಿತ್ರರು ಅಷ್ಟೆ ಅಲ್ಲದೆ, ಪಿಯುಸಿ ಹಾಗೂ ಡಿಗ್ರೀ ಕಾಲೇಜ್ ಮಿತ್ರರನ್ನು ಭೇಟಿ ಮಾಡುವ ಇಂಗೆತವಿದೆ. ಆದರೆ ಅವರನ್ನು ಯಾವಾಗ ಭೇಟಿ ಮಾಡ್ತೀನಿ ಎಂಬ ಕಾತುರ ಪ್ರತಿದಿನ ಹೆಚ್ಚಾಗುತ್ತಿದೆ.ನನ್ನ ಕಾಲೇಜ್ ದಿನಗಳು ಕೂಡ ಎಂದಿಗೂ ಮರೆಯದ ದಿನಗಳಾಗಿವೆ. ವಿಚಿತ್ರ ಅಂದ್ರೆ, ಬಾಲ್ಯದ ಜೀವನವನ್ನೆಲ್ಲಾ ಅದು ನನಗೆ ಮತ್ತೆ ಮರಳಿ ಕೊಟ್ಟಿತು ಎಂಬ ಸಂತೋಷದಲ್ಲಿದ್ದೆ. ಆದರೆ, ಅಲ್ಲಿಯೂ ಕೂಡ ಅಗಲುವಿಕೆ ಮತ್ತೆ ನಮ್ಮೆಲ್ಲರನ್ನು ಬೇರ್ಪಡಿಸಿತು.

ಆ ಮಿತ್ರರು ನನ್ನಿಂದ ಬೇರೆ ಕಡೆ ಇದ್ದು ಮರೆಯಾದ್ರೂ, ನಾನು ಅವರನ್ನು ಮರೆತಿಲ್ಲ. ನಿಜ ಹೇಳಬೇಕೆಂದರೆ ನನ್ನ ಬಾಲ್ಯದ ಜೀವನದಿಂದ ಇಲ್ಲಿಯವರೆಗೆ ಒಂದಿಲ್ಲ ಒಂದು ನೆನಪು ಕೊಟ್ಟ ಸ್ನೇಹಿತರೆಲ್ಲರೂ ನನ್ನಿಂದ ಕಣ್ಣಿನಿಂದ ಮರೆಯಾದ್ರೂ, ನನ್ನ ಮನಸಿನಿಂದ ಎಂದೂ "ಮರೆಯದವರು".

Saturday, December 29, 2007

ಮಿತ್ರರು ಒಂದೇ ಕುಟುಂಬದ ಸೊಸೆಯರಾದಾಗ..


ನನಗಾಗ 8 ವರ್ಷ. ಬಾಲ್ಯ ಸವಿಯೋ ಕಾಲ. ಸುಖ ದುಃಖ, ಮೇಲು ಕೀಳು, ಬೇಧ ಭಾವ ಅರಿಯದ ವಯಸ್ಸು. ಒಂದರ್ಥದಲ್ಲಿ ಇನ್ನೂ ಸಾಧಾರಣ ತಿಳುವಳಿಕೆ ಬಾರದ ವಯಸ್ಸು. ಕನ್ನಡ (ಪ್ರಾಥಮಿಕ) ಶಾಲೆಗೆ ಹೋಗ್ತಾ ಇದ್ದೆ. ಆ ಸಂದರ್ಭದಲ್ಲಿ ನಮ್ಮ ಮನೆಯ ಜವಾಬ್ದಾರಿಯನ್ನೆಲ್ಲಾ ಅಪ್ಪನೆ ನಿರ್ವಹಿಸಬೇಕಾಗಿತ್ತು. ಅಮ್ಮ ಅವತ್ತಿನ ದಿನ ಕೂಲಿ ನಾಲಿ ಮಾಡಿಕೊಂಡು ಸಂಸಾರದ ಹೊರೆಯಲ್ಲಿ ತನ್ನ ಪಾಲನ್ನು ನೀಡುತ್ತಿದ್ದಳು. ಅತ್ತ ಅಣ್ಣನಿಗೆ ತನ್ನ ಓದನ್ನು ಮುಂದುವರೆಸಬೇಕೆಂಬ ಹಂಬಲ. ಆದ್ರೆ ಅವನು ದುಡಿಯೋದು ಬಿಟ್ಟು ಓದುತ್ತಾ ಕೂತ್ರೆ ಹಾಳಾದ ಹೊಟ್ಟೆ ಕೇಳಬೇಕಲ್ಲಾ. ಅದಕ್ಕಾಗಿ ಅವ್ನು ದಿನದಲ್ಲಿ ಕೆಲವು ಸಮಯವನ್ನು ಕಿರಾಣಿ ಅಂಗಡಿಗೆ ಹೋಗಿ ಲೆಕ್ಕಾ ಬರೆಯೋದಕ್ಕೆ ಹೋಗ್ತಾ ಇದ್ದಾ.

ನಮ್ಮನೇಲಿ ನಾನೊಬ್ಬಳೇ ಎಲ್ಲರ ಪ್ರೀತಿಗೆ ಪಾತ್ರಳಾದ ಹುಡುಗಿ ಅಂದ್ರೆ ಅತಿಶಯೋಕ್ತಿಯೇನಲ್ಲ. ಮುಂದೆ ನಾನು ಹಾಗೊ ಹೀಗೋ ಮಾಡಿ ಎಸ್ಎಸ್ಎಲ್‌ಸಿ ಪಾಸು ಮಾಡಿಕೊಂಡೆ. ಮುಂದೆ ಕಾಲೇಜು ಮೆಟ್ಟಿಲು ಏರಿ, ಹೆಚ್ಚಿಗೆ ಓದೋಣಾ ಅಂದ್ರೆ ಮನೆ ಪರಿಸ್ಥಿತಿ ಬೇರೆ ಚೆನ್ನಾಗಿರಲಿಲ್ಲ. ನಾನು ದೊಡ್ಡವಳಾದ ಮೇಲಂತೂ ನನ್ನ ತಂದೆ ತಾಯಿಗಳು ನನ್ನ ಮದುವೆ ಮಾಡೋ ಚಿಂತೆಯಲ್ಲಿಯೇ ಮಗ್ನರಾಗಿ ಬಿಟ್ರು. ಅಷ್ಟಕ್ಕೂ ನನಗಾಗ ಮದುವೆ ಮಾಡಿಕೊಳ್ಳೋ ಹಂಬಲವೇನೂ ಇರಲಿಲ್ಲ. ಅಲ್ಲದೆ ನನ್ನ ಜೀವನದ ಮಹದಾಸೆಯೂ ಅದಾಗಿರಲಿಲ್ಲ. ನಾನು ಚೆನ್ನಾಗಿ ಓದಿ ಜೀವನದಲ್ಲಿ ನಮಗಾಗಿ ಕಷ್ಟಪಟ್ಟ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿತ್ತು. ಆದ್ರೆ, ಸರಕಾರಿ ಕಾಲೇಜಿನಲ್ಲಿ ಇನ್ನೂರು ರೂಪಾಯಿ ನೀಡುವಷ್ಟು ಸಾಮರ್ಥ್ಯ ಕೂಡ ನನ್ನ ತಂದೆಗೆ ಇರಲಿಲ್ಲ. ಏತನ್ಮಧ್ಯೆ ಹಾಸಿಗೆ ಹಿಡಿದ ಅಜ್ಜಿ ಬೇರೆ. ಸಂಸಾರಗಿಂತಲೂ ದೊಡ್ಡ ಖರ್ಚು ಅವಳದೆ.

ಹೀಗೆ ಒಂದಿಲ್ಲಾ ಒಂದು ತಾಪತ್ರೆಯಗಳು ನಮ್ಮ ಸಂಸಾರದಲ್ಲಿ ಆಗಾಗ ಬಾಣದಂತೆ ಎದೆಗೆ ನಾಟುತ್ತಲೇ ಇದ್ದವು. ನನ್ನ ಕುಟುಂಬದ ಕಷ್ಟವನ್ನು ನೋಡಲಾರದೆ, ನನ್ನಿಂದ ಏನಾದ್ರು ಸಹಾಯ ಆಗುತ್ತದೆಯೇ ಎಂದು ಆಲೋಚನೆ ಮಾಡಿ, ಪ್ರತಿನಿತ್ಯ ಅಮ್ಮನೊಂದಿಗೆ ಇನ್ನೂ ಮುಂದೆ ನಾನು ಕೂಲಿಗೆ ಹೋದರಾಯ್ತು ಅಂತಾ ವಿಚಾರ ಮಾಡಿದೆ. ಆದ್ರೆ ವಯಸ್ಸಿನ ಹೆಣ್ಮಕ್ಳು ಹೊರಗಡೆ ಹೋಗಿ ದುಡಿಯೋದು ಯಾವ ತಂದೆ-ತಾಯಿಗಳು ಇಚ್ಚೆ ಪಡ್ತಾರೆ ಹೇಳಿ... ಹಾಗೇನೆ ನಮ್ಮ ಮನೇಲೂ ಅದಕ್ಕೆ ಬೇಡ ಅಂದ್ರು. ಆದರೆ, ಕುಟುಂಬದ ನೈಜ ಪರಿಸ್ಥಿತಿ ಅನಿವಾರ್ಯವಾಗಿ ಅವರನ್ನು ಮೂಕರನ್ನಾಗಿಸಿತು.

ನಾನೂ ಅಮ್ಮನೊಂದಿಗೆ ಹೋಗಿ ದಿನನಿತ್ಯ ಕೆಲಸಕ್ಕೆ ಹೋಗಿ ದುಡೀತಾ ಇರೋದ್ರಿಂದಾಗಿ ಕುಟುಂಬದಲ್ಲಿ ಹೌದೋ ಅಲ್ಲವೋ ಅನ್ನುವಷ್ಟು ಆರ್ಥಿಕ ಮಟ್ಟ ಸುಧಾರಣೆ ಕಂಡಿತ್ತು. ಕೆಲವು ದಿನಗಳ ಈ ಕಾರ್ಯ ಬಿಡುವಿಲ್ಲದೆ ಹಾಗೇ ಮುಂದುವರೆಯಿತು. ಮಳೆಗಾಲದಲ್ಲಿ ಹೊಲ ಗದ್ದೆಗಳಲ್ಲಿ ಸಾಕಷ್ಟು ಕೆಲ್ಸಾ ಇರ್ತಿತ್ತು. ಇದರಿಂದ ಕೆಲಸಕ್ಕೆ ಯಾವ ಅಡ್ಡಿಗಳು ಬರಲಿಲ್ಲ. ಆದರೆ, ಮಳೆಗಾಲ ಮರೆಮಾಚಿ ಬೇಸಿಗೆ ಆವರಿಸಿದಾಗ, ಆಗಂತೂ ಅಪ್ಪಾ ಹಾಗೂ ಅಮ್ಮಾ ಇಬ್ರೂ ಪಟ್ಟಣಕ್ಕೆ ಹೋಗಿಯೇ ದುಡಿದುಕೊಂಡು ಬರಬೇಕಾಗಿತ್ತು. ಆದರೆ, ನಾನು ಅವರೊಟ್ಟಿಗೆ ಬರುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ನಮ್ಮೂರ ಗೌಡ್ರು ಮನೆಯಲ್ಲಿ ಮನೆಗೆಲಸ ಮಾಡಿಕೊಳ್ಳುತ್ತಾ ನಾನು ಕುಟುಂಬಕ್ಕೆ ಅಳಿಲು ಸೇವೆ ಮಾಡ್ತಾ ಇದ್ದೆ.

ಪ್ರತಿನಿತ್ಯದಂತೆ ನನ್ನ ಕೆಲಸಕ್ಕೆ ನಾನು ಗೌಡರ ಮನೆಗೆ ಹೋದೆ. ಆಗ ಅವರ ಮನೇಲಿ ಏನೋ ಒಂದು ಹಬ್ಬದ ವಾತಾವರಣ ಮೂಡಿತ್ತು. ನನಗೂ ತುಂಬಾ ಆಶ್ಚರ್ಯವಾಯ್ತು. 'ಏನಿದು ಇವತ್ತು ಎಲ್ಲರೂ ಇಷ್ಟೊಂದು ಖುಷಿಯಾಗಿದ್ದಾರೆ' ಅಂದ್ಕೊಂಡು ಮನೆಯ ಒಳಗಡೆ ಕಾಲಿಟ್ಟೆ. ಆಗ ಗೌಡಶ್ಯಾನಿ (ಗೌಡರ ಪತ್ನಿ) ಬಂದು 'ಮಲ್ಲಿ ಇವತ್ತು ನಮ್ಮ ಕವಿತಾಳನ್ನು (ಮಗಳು) ನೋಡೋಕೆ ಗಂಡಿನ ಕಡೆಯೋರು ಬರ್ತಾ ಇದಾರೆ' ಅನ್ನೊ ವಿಷಯವನ್ನು ತಿಳಿಸಿದಾಗ, ಈ ಸಂಭ್ರಮದ ಗುಟ್ಟೇನು ಅಂತಾ ಆವಾಗ ನನಗೆ ತಿಳಿತು. ಗಂಡಿನ ಕಡೆಯವರು ಇವರಿಗಿಂತಲೂ ಸ್ವಲ್ಪ ಮೇಲುಗೈ ಇದ್ದರು ಎನ್ನಿ. ಅವರಿಗೆ ಹೆಣ್ಣು ಇಷ್ಟವಾಗಿರುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿದ್ದವು.

ನಾನು ಅಂದುಕೊಂಡಂತೆ ಮರುದಿನ ನಡದೆ ಹೋಗಿತ್ತು. ಗೌಡರ ಮನೆಗೆ ಎಂದಿನಂತೆ ಕೆಲಸಕ್ಕೆ ಹೋದಾಗ, ಅಮ್ಮಾವ್ರು (ಗೌಡರ ಪತ್ನಿ) 'ಲೆ ಮಲ್ಲಿ ನಮ್ಮ ಕವಿತಾನ ಅವ್ರು ಒಪ್ಕೊಂಡಿದಾರಂತೆ. ಇವತ್ತು ಮುಂಜಾನೆ ಅವ್ರು ಫೋನ್ ಮಾಡಿ ತಿಳಿಸಿದ್ರು' ಎಂದು ಸಂಭ್ರಮದಿಂದ ತಿಳಿಸಿದಾಗ ನನಗೆ ತುಂಬಾ ಸಂತೋಷವಾಯಿತು. ಕಾಲ ಯಾರನ್ನು ಎಲ್ಲಿ, ಯಾವಾಗ ಒಂದು ಮಾಡುತ್ತೋ ಆ ದೇವರಿಗೆ ಗೊತ್ತು ಅಂತಾ ಮನೆಗೆ ಹೋದೆ.

ಈ ಘಟನೆಯಾಗಿ ಎರಡು ಮೂರು ದಿನಗಳ ನಂತರ ನನಗೊಂದು ವಿಚಿತ್ರವಾದ ಮತ್ತು ಅಷ್ಟೇ ಆಶ್ಚರ್ಯ ಕಾದಿತ್ತು. ನಮ್ಮನೇಲಿ ಯಾರೋ ಅತಿಥಿ ಬಂದು ಕುಳಿತಿದ್ದಾನೆ ! ಅವರೊಟ್ಟಿಗೆ ಅವರ ಬಂದು ಬಳಗ ಬೇರೆ ! ನನ್ನ ಕಣ್ಣುಗಳನ್ನು ನಾನೇ ನಂಬದಾಯಿತು. ಆಗ ನನ್ನ ತಾಯಿ ಒಳಗೆ ಕರೆದು 'ಲೇ ಮಲ್ಲಿ ಅವ್ರು ನಿನ್ನನ್ನ ನೋಡೋಕೆ ಬಂದಾರೆ. ಹುಡುಗನಿಗೆ ಈಗಾಗಲೇ ಒಂದ್ ಮದ್ವೆ ಆಗಿ, ಅವಳಿಗೆ ಡೈವೋರ್ಸ್ ನೀಡಿದ್ದಾನೆ. ಇದು ಅವರಿಗೆ ಎರಡನೇ ಕಡೆ ಸಂಬಂಧ. ಹುಡುಗಾ ಪರವಾಗಿಲ್ಲ. ಚೆನ್ನಾಗಿದ್ದಾನೆ. ಸುಮಾರು 34 ರ ಆಸುಪಾಸು' ಎಂದು ನನ್ನ ಅಮ್ಮ ಆ ಹುಡುಗನ ಗುಣಗಾನ ಮಾಡಿದ್ದೆ ಮಾಡಿದ್ದು. ಆದ್ರೆ.... ಮದ್ವೆ ಆಗೋಳು ನಾನು ತಾನೆ ಎಂದು ಹೇಳಿದಾಗ, ನನ್ನ ಅಮ್ಮನ ಕಣ್ಣಲ್ಲಿ ಕಂಬನಿ ತುಂಬಿಯೇ ಬಂತು. ಆಗ 'ನೋಡೇ ನಿನಗೆ ಸಾವಿರಾರು ರೂಪಾಯಿ ವರದಕ್ಷಿಣಿ ಕೊಟ್ಟು ಮದ್ವೆ ಮಾಡೋ ಶಕ್ತಿ ಅಂತೂ ಆ ದೇವ್ರು ನಮಗೆ ಕೊಟ್ಟಿಲ್ಲಾ. ಇದು ಒಳ್ಳೆ ಕಡೆ ಸಂಬಂಧ ದೇವಸ್ಥಾನದಲ್ಲಿ ಸರಳವಾಗಿ ಮದ್ವೆ ಮಾಡಿಕೊಡು ಅಂತಾ ಹೇಳಿದಾರೆ. ಅದಕ್ಕೆ ಅವ್ರೇ ಖರ್ಚು ನೀಡ್ತಾ ಇದಾರೆ. ದಯವಿಟ್ಟು ಬೇಡಾ ಅನ್ನಬೇಡ್ವೆ' ಅಂದಾಗ. ಆಯ್ತು ಅಂತಾ ಮೌನದಲ್ಲೇ ಉತ್ತರ ನೀಡಿದೆ.

ಕಾಲಚಕ್ರ ತಿರುಗತ್ತಲೇ ಇರುತ್ತದೆ ಎಂಬುವುದಕ್ಕೆ ನಾನೇ ಸಾಕ್ಷಿ. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಏನು ಗೊತ್ತೆ ನಾನು ಮದುವೆ ಆಗ್ತಾ ಇರೋ ಹುಡುಗನ ಸ್ವಂತ ತಮ್ಮನೆ ನಾನು ಪ್ರತಿನಿತ್ಯ ಕೆಲಸಕ್ಕೆ ಹೋಗ್ತಾ ಇದ್ದ ಗೌಡರ ಮಗಳ್ನಾ ಅಂದ್ರೆ ಕವಿತಾನ ಮದುವೆ ಆಗೋ ಗಂಡು ಅಂತಾ! ಎಷ್ಟೊಂದು ವಿಪರ್ಯಾಸ. ನನ್ನ ತಂದೆ ಪಟ್ಟಣಕ್ಕೆ ಕೆಲಸಕ್ಕೆ ಹೋದಾಗ ಅಲ್ಲಿ ಇವರ ಬಗ್ಗೆ ಯಾರೋ ಒಬ್ರು ಹೇಳಿದ್ದರಂತೆ. ಆ ಮೂಲಕವಾಗಿ ನಾನು ಇವರನ್ನು ಮದುವೆ ಆಗಬೇಕಾಗಿ ಬಂತು. ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ, ಕವಿತಾ ಮತ್ತು ನಾನು ಇಬ್ಬರು ಪ್ರಾಥಮಿಕ ಶಾಲೆಯಿಂದಲೇ ಮಿತ್ರರು ! ಈಗ ಒಂದೇ ಮನೆ ಸೊಸೆಯಂದಿರು ಬೇರೆ.

ನಮ್ಮ ಮಗಳು ತಾನು ಹುಟ್ಟಿನಿಂದಲೂ ಸಂಕಷ್ಟದಲ್ಲಿಯೇ ಬೆಳೆದವಳು. ತನ್ನ ಗಂಡನ ಮನೆಯಲ್ಲಾದ್ರೂ ಸುಖದಿಂದ ಬದುಕಲಿ ಎಂದು ತಂದೆ-ತಾಯಿಗಳು ಆಶಿಸಿದ್ದರು. ಆದ್ರೆ ಅದಕ್ಕೆ ತದ್ವಿರುದ್ಧವಾದ ವಾತಾವರಣ ಇಲ್ಲಿ ಸೃಷ್ಟಿಯಾಗಿತ್ತು. ಮದುವೆಯಾಗಿ ಕೆಲವು ತಿಂಗಳುಗಳು ಕಳೆದವು. ನನ್ನ ಗಂಡನ ಮನೇಲಿ ಒಂದು ರೀತಿಯ ತಾರತಮ್ಯ ಕಾಣಿಸುತ್ತಿತ್ತು. ಅದರಲ್ಲೂ ನನ್ನ ಅತ್ತೆಯಂತೂ ನಿಸ್ಸೀಮಳು. ನಾನು ಬಡವರ ಮನೆಯಿಂದ ಬಂದ ಹೆಣ್ಣು, ಕವಿತಾ ಸಾಹುಕಾರ ಮನೆಯಿಂದ ಬಂದ ಹೆಣ್ಣು ಎಂಬ ಒಂದೇ ಒಂದು ಕಾರಣಕ್ಕೆ ಅತ್ತೆ ಮನೆಯ ಹೊರಗಡೆಯಿರುವ ಬೇರೆ ಎರಡು ರೂಮ್‌ಗಳನ್ನು ನನಗೆ ನೀಡಿದಳು. ಆದ್ರೆ ನಾನು ಅದನ್ನು ಮನಪೂರ್ವಕವಾಗಿ ಸ್ವೀಕರಿಸಿದ್ದೆ.

ಆದ್ರೆ ಇದು ನನಗೆ ಹೊಸತರವೇನೂ ಕಾಣಲಿಲ್ಲ. ಗುಡಿಸಲಲ್ಲಿಯೇ ಹುಟ್ಟಿ, ಬೆಳೆದವಳು ನಾನು. ಇದು ಅಂತಹ ಬದಲಾವಣೆಯೇನೂ ನನ್ನಲ್ಲಿ ಕಾಣಲಿಲ್ಲ. ಅದು ಅಲ್ಲದೆ, ನನ್ನ ಪತಿಯೂ ಕೂಡ ಅವರು ಕೊಟ್ಟ ಒಳಗಡೆಯ ಬಂಗಲೆಯನ್ನು ಬಿಟ್ಟು ನನ್ನೊಟ್ಟಿಗೆ ಸಂಸಾರ ಸಾಗಿಸುತ್ತಿದ್ದಾರೆ. ಇದಕ್ಕಿಂತಲೂ ನನಗೆ ಬೇರೆ ಭಾಗ್ಯ ನನಗೇನು ಬೇಕು ಅಂದುಕೊಂಡು ನನ್ನ ಪತಿಯೊಂದಿಗೆ ಸುಖ ಜೀವನ ನಡೆಸುತ್ತಿದ್ದೇನೆ.

ಪ್ರಿಯ ಓದುಗರೆ, ಇಲ್ಲಿ ನಾನು ಬಿಡಿಸಿರುವ ಅಕ್ಷರಗಳ ಸರಮಾಲೆಯು ಕೇವಲ ಸೃಷ್ಟಿಯಲ್ಲ. ಇದು ನನ್ನೂರಿನಲ್ಲಾದ ನೈಜ ಘಟನೆಯನ್ನು ಆಧರಿಸಿ ಬರೆದಿರುವ ಸತ್ಯ ಸಂಗತಿ. ವಿವಿಧ ಬಗೆಯ ಕಷ್ಟ ಕಾರ್ಪಣ್ಯಗಳು ಜೀವನದುದ್ದಕ್ಕೂ ಬರುತ್ತಲೇ ಇರುತ್ತವೆ. ಆದರೆ, ಕೆಲವರ ಅನುಭವಗಳು ಇದಕ್ಕೆ ಹೊರತಾಗಿರುತ್ತವೆ.

Wednesday, November 21, 2007

ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ...

ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ ನಮ್ಮ ಹಾಗೂ ಅವರ ಮಧ್ಯೆ ಉಳಿಯುವುದು ಒಂದೇ ಅದುವೇ "ಸ್ನೇಹ". ನಿಜ. ನಮಗೆ ಯಾರಾದರೊಬ್ಬರು ಹೊಸದಾಗಿ ಪರಿಚಿತವಾದಾಗ, ಅವರೊಟ್ಟಿಗೆ ಹೇಗೆ ನಡೆದುಕೊಳ್ಳುವುದು, ಯಾವ ರೀತಿಯಾಗಿ ಅವರನ್ನು ಕಾಣಬೇಕೆಂಬ ಹಲವು ಪ್ರಶ್ನೆಗಳು ನಮ್ಮ ಮನದಲ್ಲಿ ಕಾಡತೊಡಗುತ್ತವೆ. ಕಾರಣ, ಆ ಅಪರಿಚಿತ ವ್ಯಕ್ತಿ ನಮಗೆ ಹತ್ತಿರವಾಗಿರುವುದಿಲ್ಲ ಎಂಬುದು ಒಂದು ಕಾರಣವಾದರೆ, ಇದೇ ಮೊದಲ ಬಾರಿಗೆ ಅವರ ಮುಖಚರ್ಯೆ ನನಗಾಗುತ್ತಿರುವುದು ಎಂಬುದು ಇನ್ನೊಂದು ಕಾರಣವಾಗಿದೆ.

ಕಾಲೇಜು ದಿನಗಳಲ್ಲಿಯಾದರೆ, ಅವರೊಟ್ಟಿಗೆ ಬೇಗನೆ ಹೊಂದಿಕೊಳ್ಳುವುದು ಕಷ್ಟತರವೇನಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದ ಮಾತು. ಆದರೆ, ಅದೇ ಅವರು ವೃತ್ತಿರಂಗದಲ್ಲಿ ಹೊಸದಾಗಿ ಪರಿಚಿತವಾದರೆ, ನಮ್ಮನ್ನು ಚಿಂತೆಯ ಅವಗಾಹನೆಗೆ ಎಡೆ ಮಾಡಿಕೊಡುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಅಂತಹ ವ್ಯಕ್ತಿ ಹಾಗೂ ನಮ್ಮ ನಡುವೆ "ಹೊಂದಾಣಿಕೆ" ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಸಹಜ. ಈ ಹೊಂದಾಣಿಕೆ ಅದು ವೃತ್ತಿ ಬದುಕಲ್ಲಾಗಬಹುದು, ಅವರ ಭಾಷೆಯಲ್ಲಾಗಹುದು, ವ್ಯಕ್ತಿತ್ವದಲ್ಲಾಗಬಹುದು ಅಥವಾ ಅವರ ಮನೋ ಇಚ್ಛೆಯಲ್ಲಾಗಬಹುದು. ಕೆಲವೊಮ್ಮೆ ಈ ಹೊಂದಾಣಿಕೆಯು ಅಪಾರ್ಥಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯು ಉಂಟು.

ಆದರೆ, ಹೊಂದಾಣಿಕೆ ಏಕಮಾರ್ಗವಾಗಿ ಬಂದರೆ, ಅದು ಅಷ್ಟೊಂದು ಸಮಂಜಸ ಅನಿಸುವುದಿಲ್ಲ. ಅದು ದ್ವಿಮುಖವಾಗಿಯೂ ಬಂದರೆ, ತುಂಬಾ ಒಳಿತು ಎಂಬುವುದು ಪ್ರಜ್ಞಾವಂತ ಓದುಗರ ಅಭಿಪ್ರಾಯ ಅಂಬೋಣ. ಇಂತಹ ಹೊಂದಾಣಿಕೆಯಾದ ಮೇಲೆಯೂ ಅವರು ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾರೆಯೇ ಎಂಬ ಪ್ರಶ್ನೆ ನಮ್ಮ ಮುಂದೆ ಕಾಡುತ್ತದೆ. ಖಂಡಿತ ಎಂಬುದು ನನ್ನ ದಿಟ್ಟ ಉತ್ತರ.

ಆದರೆ, ಅಂತಹ ವ್ಯಕ್ತಿ ದಿನನಿತ್ಯ ನಮ್ಮ ಬದುಕಿನಲ್ಲಾಗುವ (ವೃತ್ತಿ ಬದುಕು ಒಳಗೊಂಡಂತೆ) ಪ್ರತಿಯೊಂದು ಘಟನೆಯಲ್ಲಿ ಪಾಲ್ಗೊಂಡಾಗ ಹಾಗೂ ಸಮಸ್ಯೆಯೊಂದು ನಮ್ಮ ಮುಂದೆ ದಿಢೀರ್‌ನೆ ಪ್ರತ್ಯಕ್ಷವಾದಾಗ ಅಂತಹ ವ್ಯಕ್ತಿಗಳ ಎದುರು ಮನಸ್ಸು ಬಿಚ್ಚಿ ಮಾತನಾಡಲು ಯಾವ ಭಯ, ಅಂಜಿಕೆ ಇರುವುದಿಲ್ಲ. ಹೀಗಾಗಿ ಅವರು ನಮಗೆ ಆಪ್ತರಾಗುತ್ತಾರೆ ಎಂಬುದು ವಾದ.

ದಿನನಿತ್ಯದ ನಮ್ಮ ಕಾರ್ಯಗಳಲ್ಲಿ ನಮಗೆ ಸ್ನೇಹಿತರಂತೆ ಸಲಹೆ, ಕಷ್ಟಗಳಲ್ಲಿ ಏನೋ ಸಂಬಂಧದಲ್ಲಿ ಭಾಗಿಯಾಗಿ ಭಾವನಾತ್ಮಕವಾಗಿ ಸಂಬಂಧಕ್ಕೆ ತಿರುಗಿದಾಗ ಅವರನ್ನು ಬಿಟ್ಟಿರಲು ಅಥವಾ ದೂರವಾಗಿಸಿಕೊಳ್ಳಲು ಯಾರು ಇಚ್ಛಿಸುವುದಿಲ್ಲ.

ಇಂತಹ ವ್ಯಕ್ತಿಯೊಬ್ಬರು ಒಮ್ಮೆಲೆ ದೈಹಿಕವಾಗಿ ದೂರವಾಗುತ್ತಾರೆ ಎಂಬ ಸುದ್ದಿ ಕೇಳಿದಾಗ, (ಕಾಲೇಜಿನಲ್ಲಿ ನೀವು ಕೊನೆಯ ಗಳಿಗೆಯಲ್ಲಿ ನಿಮ್ಮ ಸ್ನೇಹಿತರ ಅಥವಾ ಸ್ನೇಹಿತೆಯರು ನಿಮ್ಮನ್ನು ಅಗಲುತ್ತಿದ್ದಾರೆ ಎನ್ನುವಂತೆ ಅನುಭವವಾಗುತ್ತದೆ) ಮನಸ್ಸಿಗೆ ಏನೋ ಒಂದು ಕಸಿವಿಸಿ, ಕೆಲಸದಲ್ಲಿ ನಿರುತ್ಸಾಹ ಜೊತೆಗೆ ಮನಸ್ಸಿಗೆ ಹತ್ತಿರವಾದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತೆ ಭಾಸ. ಅಲ್ಲದೆ ಮನಸ್ಸು ಏನನ್ನೊ ಯೋಚಿಸುತ್ತಿರುವ ಹಾಗೆ ಕೆಲಸದಲ್ಲಿ ನಿರಾಸಕ್ತಿ ತೋರಿ ಯಾವುದೋ ಚಿಂತೆಯಲ್ಲಿ ಮಗ್ನವಾಗುತ್ತದೆ.

ಪ್ರತಿನಿತ್ಯ ಒಡನಾಟದಲ್ಲಿದ್ದ, ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ದಿಢೀರನೆ ಮಾಯವಾದಾಗ. ಆಗುವ ಸಂಕಟ, ನೋವು ಅದನ್ನು ಅನುಭವಿಸಿದವನಿಗೆ ತಿಳಿದಿರಬೇಕು. ಇಂತಹ ಆಲೋಚನೆಯನ್ನು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಇಂತಹ ಅಗಲುವಿಕೆಯನ್ನು. ಇದು ನನ್ನ ಅನುಭವಕ್ಕೂ ಹೊರತಾಗಿಲ್ಲ ಎಂಬುದು ಇನ್ನೊಂದು ಕಟು ಸತ್ಯವಾದ ಮಾತು.

ಒಂದು ಗಿಡವನ್ನು ನೆಡುವುದು ಸಾಮಾನ್ಯವಾದ ವಿಷಯವಲ್ಲ. ಅದನ್ನು ಬೆಳೆಸಿ ದೊಡ್ಡ ಮರವನ್ನಾಗಿ ಮಾಡುವುದು ಅದರ ಮುಂದಿನ ಗುರಿಯಾಗಿರುತ್ತದೆ. ಅಂತೆಯೇ ಅಂತಹ ವ್ಯಕ್ತಿಗಳು ಕೆಲವೇ ದಿನಗಳವರೆಗೆ ನಮ್ಮ ಸಂಗಡ ಇದ್ದರೂ, ಅವರೊಂದಿಗೆ ಮಾಡಿಕೊಂಡ ಸ್ನೇಹ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಮುಂದಿರುವ ಗುರಿಯಾಗಿರುತ್ತದೆ. ಆದರೆ, ಇದು ಅನಿವಾರ್ಯವಲ್ಲ. ಅಪೇಕ್ಷಿತವಾದದು. ಕಾರಣ ಅವರ ವ್ಯಕ್ತಿತ್ವವೇ ಅಂತಹದ್ದಾಗಿರುತ್ತದೆ.

Saturday, November 10, 2007

ತಂಡದ ಕೊಂಡಿ ಕಳಚಿಕೊಂಡಾಗ...


ನದಿಯ ಎರಡು ದಡಗಳನ್ನು ಸೇರಿಸುವ ಸೇತುವೆಯ ಮೇಲೆ ನಡೆಯುತ್ತಿರುವಾಗ, ಒಮ್ಮೆಲೆ ಅದು ಕಳಚಿಕೊಂಡಾಗ! ನಿಮ್ಮ ಊಹೆ ಸರಿ. ಎಲ್ಲರೂ ನೀರುಪಾಲು, ಆದರೆ, ಅದರಲ್ಲಿ ಈಜು ಬಲ್ಲವ ಮಾತ್ರ ಬದುಕಬಲ್ಲ.

ಒಂದು ತಂಡವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವುದು ಸಾಮಾನ್ಯವಾದ ಕಾರ್ಯವೇನಲ್ಲ. ತಂಡದ ನಾಯಕರು ಯಾರು ಬೇಕಾದರೂ, ಆಗಬಹುದು. ಆದರೆ, ಆ ತಂಡದ ಸಹಪಾಠಿಗಳೊಂದಿಗೆ ತಮ್ಮೊಡನೆ ಕರೆದೊಯ್ಯಬಲ್ಲ ಸಮರ್ಥ ಶಕ್ತಿ, ಚಾಕಚಕ್ಯತೆ, ಚಾಣಾಕ್ಷ್ಯತನ, ಜಾಣ್ಮೆ ಹಾಗೂ ಆಸಕ್ತಿ ಅವರಲ್ಲಿ ಇರಬೇಕಾದುದು ಅತ್ಯಗತ್ಯ. ಅದು ಆಟದಲ್ಲಿರಬಹುದು ಅಥವಾ ನಮ್ಮ ವೃತ್ತಿ ಬದುಕೇ ಆಗಿರಬಹುದು.

ಗಿಡ ನೆಡುವುದು ಸುಲಭದ ಕೆಲಸ. ಅದನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಅದಕ್ಕೆ ಸಮಪ್ರಮಾಣದ ನೀರು, ಪೋಷಾಂಕಾಂಶಗಳನ್ನು ಹಾಕಿ ಬೆಳೆಸಿ ಮರ, ಹೆಮ್ಮರವಾಗಿ ಮಾಡುವುದು ತುಂಬಾ ಕಷ್ಟ. ಅದು ದೊಡ್ಡ ಹೆಮ್ಮರವಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ತಮ್ಮ ಕೈಯಿಂದ ಇಂತಹ ಕೆಲಸ ಏನು ಆಗದು ಎಂಬ ಮನೋವ್ಯಾಧೆಯಿಂದ ಕೆಲವು ನಿಷ್ಪ್ರಯೋಜಕರು ಇಂತಹ ಮರವನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಕೀಳರಿಮೆ ಚಿಂತನೆಗೆ ಒಳಗಾಗುವುದನ್ನು ನಾವು ಕಂಡಿದ್ದೇವೆ.

ಛಲ, ಅಚಲ ನಿರ್ಧಾರಗಳು, ಶಿಸ್ತು ಹಾಗೂ ದೃಢ ನಿಶ್ಚಯಗಳು ತಂಡದಲ್ಲಿರಲೇಬೇಕಾದುದು ಅತೀ ಮುಖ್ಯವಾದ ಅಂಶಗಳೆಂದು ನಾನು ಅಂದುಕೊಂಡಿದ್ದೇನೆ. ಆದರೆ, ಇವು ಕೆಲವೊಮ್ಮೆ ಮನುಷ್ಯನನ್ನು ಇಕ್ಕಟ್ಟಿಗೆ ಸಿಕ್ಕಿ ಹಾಕಿಸುತ್ತವೆ. ಆದರೂ ಕೂಡ ಇವು ತಂಡದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ.

ತಂಡದ ತನ್ನ ಕಾರ್ಯವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಕೆಲವು ವಿಚಿತ್ರ ತಿರುವುಗಳು, ದಿಗ್ಭ್ರಮೆ ಉಂಟು ಮಾಡುವಂತ ಸನ್ನಿವೇಶಗಳು ಘಟನೆಗಳು ನಡೆದು ಹೋಗುತ್ತವೆ. ಇದಕ್ಕೆ ಅಚ್ಚರಿ ಪಟ್ಟರೂ ಚಿಂತೆಯಿಲ್ಲ.

ತಾನು ತನ್ನ ತಂಡವನ್ನು ಮುಂಚೂಣಿಯಲ್ಲಿ ತರಬೇಕು, ಒಂದು ಆದರ್ಶಪ್ರಾಯವಾದ ತಂಡವನ್ನು ಕಟ್ಟಬೇಕು. ಅದನ್ನು ಎಲ್ಲರಿಗಿಂತಲೂ ಚೆನ್ನಾಗಿ ಪೋಷಿಸಬೇಕು, ಬೃಹತ್ ಪ್ರಮಾಣದಲ್ಲಿ ಬೆಳೆಸಬೇಕು ಎಂಬ ಹತ್ತು ಹಲವಾರು ಆಲೋಚನೆಗಳನ್ನು ಹಾಗೂ ಜೀವಂತ ಕನಸುಗಳನ್ನು ಹೊತ್ತುಕೊಂಡು ಹೋಗುತ್ತಿರುವಾಗ, ದಾರಿ ಮಧ್ಯೆ ಹಲವಾರು ಬಗೆಯ ಎಡರು ತೊಡರುಗಳು ಕಾಡತೊಡಗುತ್ತವೆ. ಕೆಲವೊಮ್ಮೆ ಬಿರುಗಾಳಿಗೆ ಸಿಕ್ಕ ಹೆಮ್ಮರ ನೆಲಕಚ್ಚಿದಂತೆ, ಆ ತಂಡವು ಕೂಡ ನಿಷ್ಪ್ರಯೋಚಕರ ಬಿರುಗಾಳಿಗೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ.

ಹಲವಾರು ಕನಸುಗಳನ್ನು ಕಟ್ಟಿಕೊಂಡು ಬೆಳೆಸುತ್ತಿರುವ ಕೂಸನ್ನು ಮಧ್ಯದಲ್ಲಿಯೇ ಚಿವುಟಿ ಹಾಕಿದಾಗ, ಅಥವಾ ಅಂತಹ ಒಂದು ತಂಡದ ಕೊಂಡಿ ಕಳಚಿಕೊಂಡಾಗ, ಅಂತಹ ಸಂದರ್ಭದಲ್ಲಿ ಮನಸ್ಸಿಗೆ ಉಂಟಾಗುವ ಆಘಾತ, ನೋವು, ಸಂಕಟ, ದುಃಖ ಅಷ್ಟಿಷ್ಟಲ್ಲ. ಅದಕ್ಕೆ ಹೇಳೋದು Experience Can't Explain ಅಂತ.
ಇದೊಂದು ಅನಿರೀಕ್ಷಿತ ಬೆಳವಣಿಗೆ ಅಂತಲೇ ಹೇಳಬಹುದು. ಯಾರೂ ಕೂಡ ಇಂತಹ ಅಚ್ಚರಿಗೆ ಪಾತ್ರರಾಗಬೇಕಿಲ್ಲ. ಆದರೆ, ಈ ಮೊದಲೇ ನಾನು ಹೇಳಿದಂತೆ ಎರಡು ಸೇತುವೆಯನ್ನು ಸೇರಿಸುವ ಸೇತುವೆಯ ಮೇಲೆ ನಾವು ನಡೆಯುತ್ತಿರುವಾಗ ದಿಢೀರನೆ ಮುರಿದು ಬಿಟ್ಟರೆ. ಖಂಡಿತ ನಾವು ನೀರು ಪಾಲು. ಆದರೆ, ಈಜು ಬಲ್ಲವ ಮಾತ್ರ ಪಾರು ಎಂಬಂತೆಯೇ, ತಂಡದಲ್ಲಿ ಸ್ವಸಾಮರ್ಥ್ಯವಿರುವವು (ಅಂದರೆ ಈಜುಬಲ್ಲವನು) ತಡ ಎಷ್ಟು ದೂರವಿದ್ದರೂ, ಈಜಬಲ್ಲ. ಅವನು ಇಚ್ಛೆಪಟ್ಟರೆ, ತಂಡದ ಸಹಪಾಠಿಗಳನ್ನು ಮುನ್ನಡೆಸಿಕೊಂಡು ದಡ ಸೇರಿಸಬಲ್ಲ.

ಆದರೆ, ಇಂತಹ ಬೆರಗುಗೊಳಿಸುವ ಬೆಳವಣಿಗೆಗಳು ಅಲ್ಪಕಾಲ ಮಾತ್ರ ಎಂಬುವುದನ್ನು ನಾವು ಮರೆಯುವಂತಿಲ್ಲ. ಕತ್ತಲೆ ಎಷ್ಟೇ ಪ್ರಮಾಣದಲ್ಲಿದ್ದರೂ, ಬೆಳಕಿನ ಒಂದೇ ಒಂದು ಕಿರಣ ಅದರಲ್ಲಿ ಹಾಯ್ದುಹೋದರೆ ಸಾಕು, ಯಾವುದು ಬಲಿಷ್ಟ ಎಂಬುವುದು ಬಿಡಿಸಿ ಹೇಳಬೇಕಿಲ್ಲ.

Friday, November 2, 2007

ಕಲೆಯಋಷಿ ಶಾರೂಖ್ ‌ಖಾನ್‌ಗೆ ಇಂದು 42ರ ಸಂಭ್ರಮ


ಕಲೆಯನ್ನು ಬದುಕಿನ ಒಂದು ಅಂಗವಾಗಿ ಮಾಡಿಕೊಂಡು ವೇಷ ಹಾಕುವವರನ್ನು ನೋಡಿದ್ದೇವೆ. ಆದರೆ, ಕಲೆಯನ್ನೇ
ಬದುಕನ್ನಾಗಿ ಮಾಡಿಕೊಂಡು ಪಕ್ಕಾ ವೃತ್ತಿಪರರಾಗಿ ಅದನ್ನೇ ಜೀವಾಳವಾಗಿರಿಸಿಕೊಂಡವರ ಬಣ್ಣದ ಕಥೆಯು ನಿಜಕ್ಕೂ
ವಿಸ್ಮಯವಾಗಿರುತ್ತೆ. ಅಂತಹ ಕಲೆಯಲ್ಲಿ ಚಿತ್ರರಂಗವು ಒಂದು.


ಮುಖಕ್ಕೆ ಬಣ್ಣ ಬಳಿದುಕೊಂಡು, ಕತ್ತಲೆ ಕೋಣೆಯೊಂದರಲ್ಲಿ ಮೂರು ಗಂಟೆಗಳ ಕಾಲ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ
ಕಲೆಗಾರಿಕೆ ನಿಜಕ್ಕೂ ಅದ್ಭುತ. ಇಂತಹ ಪ್ರತಿಭೆಯನ್ನು ನಾವು ಎಲ್ಲರಲ್ಲೂ ಕಾಣುವುದು ಅಸಾಧ್ಯವಾದದ ಮಾತು. ಆದರೆ,
ಅದನ್ನು ಕೆಲವರು ಮಾತ್ರ ಪಡೆದುಕೊಂಡಿರುತ್ತಾರೆ. ಅಂತಹ ಸಾಲಿಗೆ ಬಾಲಿವುಡ್ ನಟ ಶಾರೂಖ್ ಖಾನ್ ಕೂಡ ಸೇರಿದ್ದಾರೆ.


ತಮ್ಮ ಅದ್ಭುತ ಕಲೆಯ ಮೂಲಕ ದೇಶ ವಿದೇಶಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಶಾರೂಖ್ ಖಾನ್
ಇಂದು (02-11-2007) 42 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕತ್ತಲೆಕೋಣೆಯಲ್ಲಿ ಕಲೆಯನ್ನು ತೋರ್ಪಡಿಸಿರುವ ಶಾರೂಖ್
ತಮ್ಮ ನೈಜ ಸ್ವರೂಪದ ಬೆಳಕನ್ನು ಹೊರಚೆಲ್ಲಿದ್ದಾರೆ.


ಶಾರೂಖ್ ಜೀವನ:ಸ್ವತಂತ್ರ ಹೋರಾಟಗಾರ ತಾಜ್ ಮೊಹಮ್ಮದ್ ಹಾಗೂ ಫಾತಿಮಾ ಖಾನ್ ಅವರ ಪುತ್ರನಾಗಿ ಶಾರೂಖ್ ಖಾನ್ 1965, ನವೆಂಬರ್ 2 ರಂದು ಜನ್ಮ ತಳೆದರು. ನಂತರ ತಮ್ಮ ವಿದ್ಯಾಭ್ಯಾಸವನ್ನು ಸೆಂಟ್ ಕೊಲಂಬಿಯಾ ಶಾಲೆಯಲ್ಲಿ
ಪೂರ್ಣಗೊಳಿಸಿದರು. ಶಾರೂಖ್ ಚಿತ್ರರಂಗದಲ್ಲಿ ಬರುತ್ತಾರೆ, ಮಿಂಚುತ್ತಾರೆ, ಒಬ್ಬ ದೊಡ್ಡ ಕಲಾವಿದನಾಗುತ್ತಾನೆ ಎಂಬ
ಯಾವ ಕನಸನ್ನು ಹೊತ್ತುಕೊಂಡಿರಲಿಲ್ಲ. ಕೊಲಂಬಿಯಾ ಶಾಲೆಯು ಉತ್ಸಾಹಿತ ಮಕ್ಕಳಿಗೆ ಸ್ವಾರ್ಡ್ ಪ್ರಶಸ್ತಿಯನ್ನು ನೀಡಿ
ಗೌರವಿಸುತ್ತದೆ. ಈ ಪ್ರಶಸ್ತಿಗೆ ಶಾರೂಖ್ ಆಯ್ಕೆಯಾದಾಗ ಅವರೊಬ್ಬ ಕಲಾವಿದರಾಗುವ ಲಕ್ಷಣಗಳು ಕಾಣಿಸಿಕೊಂಡವು.


ಅಲ್ಲದೆ, ಶಾಲಾ ಅವಧಿಗೆ ಚಕ್ಕರ್ ಹೊಡೆದು, ನಾಟಕಗಳಲ್ಲಿ ಪಾಲ್ಗೊಳ್ಳುವುದಕ್ಕೆ ಪ್ರಾರಂಭಿಸಿದರು. ಇದರಿಂದ ಅಭಿನಯದತ್ತ
ತಮ್ಮ ಚಿತ್ತವನ್ನು ಹರಿಸಿದರು. ನಂತರ ಹನ್ಸ್‌ರಾಜ್ ಕಾಲೇಜಿನಿಂದ ಪದವಿಯನ್ನು ಮುಗಿಸಿಕೊಂಡ ಶಾರೂಖ್ ಖಾನ್,
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿಯನ್ನು
ಮುಗಿಸಿಕೊಂಡರು.


ಬೆಳ್ಳಿತೆರೆಗೆ ಬರುವ ಮುಂಚಿತವಾಗಿ ಶಾರೂಖ್ ಖಾನ್ ಅವರು, ಫೌಜಿ ಹಾಗೂ ಸರ್ಕಸ್ ಧಾರಾವಾಹಿಗಳ ಮೂಲಕ
ಕಿರುತೆರೆಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಪ್ರಾರಂಭವಾಯಿತು ಅವರ ಬಣ್ಣದ ಬದುಕು. ನಂತರ ಶಾರೂಖ್‌ ಮಾಯಾನಗರಿ
ಮುಂಬೈಗೆ ಆಗಮಿಸಿ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವ ಆಸೆಗೆ ಮುಂದಾದರು. ಆದರೆ, ಅವರಿಗೆ ದಿಕ್ಕಾಗಿದ್ದ ಅವರ ತಂದೆ
ತಾಯಿಗಳನ್ನು 1991 ರಲ್ಲಿಯೇ ಕಳೆದುಕೊಂಡು ಅನಾಥರಾದರು.


ಖಾನ್ ತಮ್ಮ ತಂದೆತಾಯಿಗಳನ್ನು ಕಳೆದುಕೊಂಡ ನಂತರ, 1991 ರಲ್ಲಿಯೇ ಗೊರ್‌ಗಾವ್‌ದಿಂದ ಮುಂಬೈಗೆ ಆಗಮಿಸಿದರು.
ಇದಾದ ಕೇವಲ ಒಂದೇ ವರ್ಷದಲ್ಲಿ (1992 ರಲ್ಲಿ) "ದಿವಾನಾ" ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಯ ಚಿತ್ರಗಳನ್ನು
ರೂಪಿಸಲು ಪ್ರಾರಂಭಿಸಿದರು. ಇದು ಅವರ ಮೊಟ್ಟ ಮೊದಲ ಚಿತ್ರವಾದರೂ, ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಚರ್ಚೆಗೆ
ಗ್ರಾಸವಾಯಿತು. ಈ ಚಿತ್ರದ ಮೂಲಕವೇ ಶಾರೂಖ್‌ ತಮ್ಮನ್ನು ಗುರುತಿಸಿಕೊಂಡರು.


ಅಷ್ಟೇ ಅವರ ಮೊದಲ ಚಿತ್ರವು ಫಿಲ್ಮ್‌ಫೇರ್‌ನ ಉತ್ತಮ ಪ್ರಶಸ್ತಿಯು ದೊರೆಯಿತು. ಇದಾದ ನಂತರ ಅವರು ನಟಿಸಿದ
"ಮಾಯಾ ಮೆಮ್‌ಸಾಬ್" ಚಿತ್ರವು ಸ್ವಲ್ಪ ವಿವಾದವೆಬ್ಬಿಸಿತು. ಕಾರಣವಿಷ್ಟೇ, ಅದರಲ್ಲಿ ಶಾರೂಖ್ ಲೈಂಗಿಕ ಚಿತ್ರಗಳಲ್ಲಿ
ಕಾಣಿಸಿಕೊಂಡಿದ್ದರು. ಹೀಗೆ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ "ಕಭಿ ಖುಷ್, ಕಭಿ ಗಮ್" ಅನುಭವಿಸಿ, ಮುಂದೆ ಬಾಲಿವುಡ್
ಚಿತ್ರರಂಗದ "ಅಶೋಕ್" ಚಕ್ರವರ್ತಿಯಾಗಿ ಮೆರೆದಿದ್ದು ನಿಜಕ್ಕೂ ವಿಸ್ಮಯ.


ಹಿಟ್ ಚಿತ್ರಗಳು:
ಶಾರೂಖ್ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. 1993 ರಲ್ಲಿ ಅವರು ಅಭಿನಯಿಸಿದ
"ಬಾಜಿಗರ್" ಹಾಗೂ "ಡರ್" ಚಿತ್ರಗಳು ಮತ್ತೊಂದು ಹೊಸ ಅಲೆಯನ್ನು ಸೃಷ್ಟಿಸಿದವು. ಆದರೆ ಈ ಚಿತ್ರದಲ್ಲಿ ಹೀರೊ ರೂಪದ
ಖಳನಾಯಕನಾಗಿ ಅಭಿನಯಿಸಿದ್ದು ವಿಶೇಷ. ಅವರು ಖಳನಾಯಕನಾಗಿ ನಟಿಸಿದ ಮೊದಲ ಚಿತ್ರಗಳಾದರೂ, ಇವು
ಪ್ರೇಕ್ಷಕರ ಅಚ್ಚುಮೆಚ್ಚುಗೆಗೆ ಪಾತ್ರವಾದವು. "ಬಾಜಿಗರ್" ಚಿತ್ರದಲ್ಲಿನ ಅವರ ಅದ್ಭುತ ಅಭಿನಯಕ್ಕೆ ಮೆಚ್ಚಿ ಫಿಲ್ಮ್‌ಫೇರ್
ಅತ್ಯುತ್ತಮ ನಟ ಪ್ರಶಸ್ತಿಯು ದೊರಕಿತು.


ಇದಾದ ನಂತರ "ಕಭಿ ಹಾ ಕಭಿ ನಾ" ಚಿತ್ರವು ಅವರಿಗೆ ದೊಡ್ಡ ಪ್ರಮಾಣದ ಯಶಸ್ಸು ದೊರಕಿಸಿಕೊಟ್ಟಿತು. ಈ ಚಿತ್ರಕ್ಕೂ
ಕೂಡ ಅವರಿಗೆ ಫಿಲ್ಮ್‌ಫೆರ್‌ನ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತು. ನಂತರ ಅವರು ನಟಿಸಿದ ಕರಣ್ ಅರ್ಜುನ್,
ಡಿಡಿಎಲ್‌ಜಿ, ಪರದೇಸಿ, ಕುಚ್ ಕುಚ್ ಹೋತಾ ಹೈ, ಕಭಿ ಖುಷ್ ಕಭಿ ಗಮ್, ವೀರ್ ಜರಾ ಹಾಗೂ ಇತ್ತೀಚೆಗೆ ರೂಪಿಸಿರುವ
ಚಕ್ ದೇ ಇಂಡಿಯಾಗಳು ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಯಶಸ್ಸು ದೊರಕಿಸಿ ಕೊಟ್ಟಿವೆ.


ಶಾರೂಖ್ ನಿಜಕ್ಕೂ ಅದ್ಭುತ ಕಲಾವಿದ. ಇಂದಿಗೂ ಕೂಡ ಅವರ ಚಿತ್ರಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ
ಅಭಿಮಾನಿಗಳು ಮುಗಿಬೀಳುತ್ತಾರೆ. ಅವರು ಕನ್ನಡದ ದೀಪಿಕಾ ಪಡುಕೋಣೆ ಅವರೊಂದಿಗೆ "ಓಂ ಶಾಂತಿ ಓಂ" ಚಿತ್ರವನ್ನು
ಈಗಾಗಲೇ ಪೂರ್ಣಗೊಳಿಸಿದ್ದು, ದೀಪಾವಳಿಯ ಹಬ್ಬದಂದು ಅದು ಬಿಡುಗೊಳ್ಳಲಿದೆ.


ಈ ಲೇಖನವನ್ನು ಎಂಎಸ್ಎನ್ ಕನ್ನಡ ಪೋರ್ಟಲ್‌ನಲ್ಲಿಯೂ ಓದಬಹುದು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.