Saturday, March 22, 2008

ಅವನು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ


ತನ್ನ ಸ್ವಂತ ಊರಿಂದ ಕಾಲೇಜಿಗೆ ಸುಮಾರು ಮೈಲಿ ನಡೆಯಬೇಕಾಗಿದ್ದರಿಂದ, ಅಜಿತ್ ತನ್ನ ದೊಡ್ಡಮ್ಮನ ಊರಿಗೆ ತೆರಳಿದ. ಅವನು ತನ್ನ ತಂದೆ-ತಾಯಿಗೆ ನಾಲ್ಕನೆ ಮಗ. ಅವರಿಗೆ ಹೆಣ್ಣು ಮಕ್ಕಳಿರಲಿಲ್ಲ. ಎಲ್ಲರೂ ಗಂಡು ಮಕ್ಕಳೇ. ಸಾಮಾನ್ಯವಾಗಿ ಕೊನೆಯ ಮಗ ಅಂದ್ರೆ, ಎಲ್ಲರಿಗಿಂತಲೂ ಅವರ ಮೇಲೆ ಪ್ರೀತಿ ಹೆಚ್ಚಾಗಿರುತ್ತೆ. ಅದು ಸ್ವಾಭಾವಿಕ ಕೂಡ. ಅಂಥ ಪ್ರೀತಿನ ಕೆಲವರು ದುರುಪಯೋಗ ಮಾಡಿಕೊಳ್ಳುವವರು ಇದಾರೆ. ಆದರೆ ಅಜಿತ ಇದಕ್ಕೆ ಅಪವಾದವಾಗಿದ್ದ.

ಮನೆಯಲ್ಲಿ ತಂದೆ ತಾಯಿ ಎಂದರೆ ಅವನಿಗೆ ಅಚ್ಚು ಮೆಚ್ಚು. ಅವರಿಗೂ ಕೂಡ ಇವನೆಂದರೆ ಎಲ್ಲಿಲ್ಲದ ಪ್ರೀತಿ, ಅಷ್ಟೇ ವಾತ್ಸಲ್ಯ ಕೂಡ. ಮನೆಯಲ್ಲಿ ಅಷ್ಟೇ ಅಲ್ಲಾ, ಶಾಲೆಯಲ್ಲಿಯೂ ಇವನು ನಂ.೧. ಮಾಸ್ತರು ಇವನ ವಿನಯತೆ ಹಾಗೂ ಮುಗ್ಧತೆಯನ್ನು ಕಂಡು ಮೆಚ್ಚಿಕೊಂಡಿದ್ದರು. ಮಾತಿನಲ್ಲೂ ಅಜಿತ್ ಎಂಥವರನ್ನೂ ಗೆಲ್ಲುವವನಾಗಿದ್ದ. ತನ್ನ ಸ್ವಂತ ಊರಿನಲ್ಲಿ ಇವನ ಮಾತಿಗೆ, ನಡತೆಗೆ ಮರುಳಾಗದವರು ಇರಲೇ ಇಲ್ಲ ಎನ್ನಿ.

ಗುಂಗುರ ಕೂದಲು, ಧ್ರುಡವಾದ ಮೈಕಟ್ಟು, ಈಗಿನಂತೆ ಜೀನ್ಸ್ ಫ್ಯಾಂಟ್ ಧರಿಸಿ ಹೆಚ್ಚು ಸ್ಟೈಲ್ ಮಾಡದೆ, ತುಂಬಾ ಸರಳವಾದ ಉಡಿಗೆ ತೊಡುತ್ತಿದ್ದ. ಒಂದರ್ಥದಲ್ಲಿ ಸಾಂಪ್ರದಾಯಿಕ ಮನುಷ್ಯ. ಅದು ಕೇವಲ ಉಡಿಗೆ ತೊಡುಗೆಗಳಲ್ಲಿ ಮಾತ್ರ ಇದ್ದಿರಲಿಲ್ಲ. ಅವನು ಮಾತಿನಲ್ಲಿ, ನಡುವಳಿಕೆಯಲ್ಲೂ ರೂಡಿಗತವಾಗಿ ಬಂದಿತ್ತು.

ತಾನು ಹೆಚ್ಚು ಕಲಿಯಬೇಕು, ಜೀವನದಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಅವನಲ್ಲಿ ಬೆರೂರಿತ್ತು. ವಿಚಿತ್ರ ಅಂದ್ರೆ ಅವನ ತಂದೆಯೇನೂ ಕಡಿಮೆ ಇರಲಿಲ್ಲ. ನೂರಾರು ಎಕರೆ ಹೊಲ ಇತ್ತು. ಪ್ರತಿ ವರ್ಷ ಅದರಿಂದ ಲಕ್ಷಾಂತರ ರು. ಫಸಲು ಬೆಳಿತಾ ಇದ್ರು. ಆದರು ಅವನ ತಂದೆ ಮಾಡಿದ ಆಸ್ತಿ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ, ಓದಬೇಕು ಎಂಬ ದೊಡ್ಡ ಹಂಬಲ ಹಾಗೂ ಚಲವನ್ನಿತ್ತುಕೊಂಡು ತನ್ನ ದೊಡ್ಡಮ್ಮನ ಊರಿನತ್ತ ಚಿತ್ತ ಹರಿಸಿದ.

ಅಜಿತ್ ಅವರ ದೊಡ್ಡಮ್ಮನ ಊರಿಗೆ ಬಂದು ಇನ್ನೂ ಒಂದು ತಿಂಗಳಾಗಿರಲಿಲ್ಲ. ಆ ಮನೆಯ ಸದಸ್ಯರೆಲ್ಲರ ಮನಸ್ಸನ್ನು ತನ್ನ ಮುತ್ತಿನಂಥ ಮಾತುಗಳಿಂದ ಹಾಗೂ ಕೆಲಸದಿಂದ ಮಂತ್ರ ಮುಗ್ಧರನ್ನಾಗಿ ಮಾಡಿದ್ದ. ನಾನು ಕಾಲೇಜಿಗೆ ಹೋಗುತ್ತಿದ್ದೇನೆ ಎನ್ನುವ ಒಂದು ಚೂರು ಅಹಂಕಾರವಿಲ್ಲದೆ, ಅವರ ದೊಡ್ಡಮ್ಮನ ಮನೆಯ ದನದ ಕೊಟ್ಟಿಗೆಯಲ್ಲಿ ಶೆಗಣಿಯನ್ನೂ ಬಳಿತ್ತಿದ್ದ. ನಿಜಕ್ಕೂ ಇವನನ್ನು ಹಡೆದವರು ಪುಣ್ಯವಂತರು ಎಂದು ಜನಾ ಕೂಡ ಆಡಿಕೊಳುತ್ತಿದ್ರು.

ಅಜಿತನಿಗೆ ವಾಣಿಜ್ಯದಲ್ಲಿ ತುಂಬಾ ಆಸಕ್ತಿ ಇದ್ದಿದ್ದರಿಂದ ಬಿ.ಕಾಂ ಗೆ ಅಡ್ಮಿಶನ್ ಮಾಡಿಸಿದ್ದ. ಮೊದಲ ವರ್ಷ ಚೆನ್ನಾಗಿ ಸ್ಕೋರ್ ಮಾಡಿ, ಫರ್ಸ್ಟ್ ಕ್ಲಾಸಿನಲ್ಲಿ ಪಾಸಾದ. ಹಾಗೂ ಹೀಗೂ ಮಾಡಿ ಮೊದಲ ವರ್ಷ ಮುಗಿಸಿದ. ಅಷ್ಟೊತ್ತಿಗಾಗಲೇ ಅವನಿಗೆ ಕಾಲೇಜಿನಲ್ಲೂ ಸಾಕಷ್ಟು ಮಂದಿ ಸ್ನೇಹಿತರಾಗಿ ಬಿಟ್ಟಿದ್ದರು.

ಅವರು ಎಷ್ಟೊಂದು ಅವನನ್ನು ಹಚ್ಚಿಕೊಂಡಿದ್ದರು ಅಂದ್ರೆ ಕೆಲವೊಂದು ಸಲ ಅಜಿತ ಕಾಲೇಜಿಗೆ ಹೋಗದಿದ್ದರೆ ಅವನ ಸ್ನೇಹಿತರು ಮನೆಗೆ ಬಂದು ವಿಚಾರಿಸುತ್ತಿದ್ದರು. ಆ ಮಟ್ಟಿಗೆ ಅವನ ಸ್ನೇಹಕ್ಕೆ ಅಂಟಿಕೊಂಡಿದ್ದರು.

ಆಗ ತಾನೆ ಅಜಿತ್ ತನ್ನ ಎರಡನೆ ವರ್ಷದ ಬಿ.ಕಾಂ ಪರೀಕ್ಷೆ ಮುಗಿಸಿದ್ದ. ತನ್ನೂರಿಗೆ ಹೋಗಿ ಬಂದ ಮೇಲೆ ಫೈನಲ್ ಡಿಗ್ರಿಗೆ ಕೋಚ್ ತೆಗೆದುಕೊಂಡರಾಯಿತು ಅಂಥ ಪ್ಲಾನ್ ಮಾಡಿಕೊಂಡಿದ್ದ. ಆದರೆ ಅವನ ಸ್ನೇಹಿತರು ಅವನನ್ನು ಊರಿಗೆ ಕಳುಹಿಸಲು ಇಷ್ಟವಿರಲಿಲ್ಲ. ಹೀಗಾಗಿ ಅಜಿತ ತನ್ನ ಅಕ್ಕನ (ತನ್ನ ದೊಡ್ಡಮ್ಮನ ಮಗಳು) ಊರಿಗೆ ಹೋಗೋಣ ಅಂದುಕೊಂಡು, ತನ್ನ ಸ್ನೇಹಿತರೊಂದಿಗೆ ಅಲ್ಲಿಗೆ ಹೋದ. ಅಂದು ತನ್ನ ಅಕ್ಕನ ಮನೆಗೆ ಹೋದ ಅಜಿತ ಅಂದು ಎಲ್ಲರೊಂದಿಗೆ ಸಂತಸದಿಂದ ಕಾಲ ಕಳೆದ. ಅವನ ಸ್ನೇಹಿತರೂ ಅವನಿಗೆ ಒಳ್ಳೆ ಕಂಪನಿ ಕೊಟ್ರು.

ಮಾರುದಿನ ಬೆಳಗ್ಗೆ ಸರಿಸುಮಾರು ಹತ್ತು ಗಂಟೆಯಾಗಿತ್ತು. ಅವನ ದೊಡ್ಡಮ್ಮನ ಮನೆಯ ಫೋನ್ ರಿಂಗ್ ಆಯಿತು. ಫೋನ್ ರಿಸಿವ್ ಮಾಡಿದ ಅವರಣ್ಣ (ದೊಡ್ಡಮ್ಮನ ಮಗ) ಏನೂ ತೋಚದಂತೆ ದಿಗ್ಭ್ರಾಂತನಾಗಿ ಹಾಗೆ ನಿಂತು ಬಿಟ್ಟ. ಮನೆಯವರಿಗೆಲ್ಲ ತುಂಬಾ ಗಾಬರಿಯಿಂದ "ಏನಾಯಿತು" ಅಂಥ ಕೇಳಿದಾಗ ಅವರಣ್ಣ ಹೇಳಿದ್ದೇನು ಗೊತ್ತೆ ' ಅಜಿತ ಈಜಲು ಹೋಗಿ ಹೊಳ್ಯಾಗ ಬಿದ್ದು ಸತ್ತು ಹೊಗ್ಯಾನಂಥ. ಅವನ ಹೆಣ ಇನ್ನೂ ಹುಡುಕ್ತಾ ಇದಾರಂತೆ' ಅಂದಾಗ. ಮನೆಯಲ್ಲಿ ಶ್ಮಶಾನ ಮೌನ ಆವರಿಸಿತ್ತು.
ಇದಕ್ಕೆ ಅನ್ನೋದು ವಿಧಿ ಆಟ ಅಂಥ. ದೇವರು ತನ್ನ ಕಡೆ ಯಾವಾಗಲು ಒಳ್ಳೆಯವರನ್ನೇ ಕರೆದುಕೊಳ್ಳುತ್ತಾನೆ ಅಂತ ಊರಿನ ಜನಾ ಎಲ್ಲ ಕಣ್ಣಿರು ಹಾಕ ತೊಡಗಿದರು.

ಆ ಸಾವು ಕೂಡ ಅವನನ್ನು ತನ್ನತ್ತ ಕರೆದುಕೊಳ್ಳುವಾಗಲೂ, ಅಜಿತನಿಗೆ ಈಜು ಬಾರದಂತೆ ಮಾಡಿ ನದಿಯನ್ನು ಸಾವಿನ ಕುಣಿಕೆಯನ್ನಾಗಿಸಿ, ತಿರುಗುಣಿ ಎಂಬ ಪಾಶಕ್ಕೆ ಸಿಕ್ಕಿ ಹಾಕಿಸಿ ಅವನ ಪ್ರಾಣ ಹಿಂಡಿಕೊಂಡಿತು.

ಬಿಟ್ಟು ಹೋಗ್ತಾನೆ ಅಂದಾಗಲೇ ತಾಯಿ ಹೃದಯ ವಿಲಿವಿಲಿ ಅಂತಿತ್ತು. ಇನ್ನು ಮಗ ನಮ್ಮನ್ನೆಲ್ಲಾ ಬಿಟ್ಟು ಶಾಶ್ವತವಾಗಿ ಕಣ್ ಮುಚ್ಚಿಕೊಂಡಿದ್ದಾನೆ ಎಂಬ ವಿಷಯ ತಿಳಿದ ತಾಯಿ ಅದೆಷ್ಟು ನೋವು, ವೇದನೆ, ಸಂಕಟ ಪಟ್ಟಿರಬೇಡ ನೀವೇ ಊಹಿಸಿ.
ಎರಡು ದಿನಗಳಾದ ನಂತರ ಅಜಿತನ ಹೆಣ ಸಿಕ್ಕಿತು. ಅವನ ತಂದೆ ತಾಯಿ, ಬಂಧು ಬಳಗ, ಸ್ನೇಹಿತರೆಲ್ಲ ಅವನ ಅಗಲುವಿಕೆಯಿಂದ ಸಾಕಷ್ಟು ನೊಂದರು. ಇಂತ ವ್ಯಕ್ತಿಯೊಬ್ಬ ನೂರುಕಾಲ ಬಾಳಬೇಕಿತ್ತು ಎಂಬುದು ಅವನ ಬಗ್ಗೆ ತಿಳಿದುಕೊಂಡ ಜನರೆಲ್ಲ ಮಾತನಾದಿಕೊಲ್ಲುತ್ತಲೇ ಇದ್ದರು.


ನಿಜ ಅಜಿತ ಸಾವಿನಲ್ಲೂ 'ಅಜಿತ' ನಾಗಬೇಕಿತ್ತು. ಆದರೆ ವಿಧಿ ಬರಹದ ಮುಂದೆ ಯಾರು ದೊಡ್ಡವರಲ್ಲ....


ಇನ್ನೊಂದು ವಿಷಯ ಗೊತ್ತಾ ಈ ಅಜಿತ ಬೇರೆ ಯಾರು ಅಲ್ಲ ನನ್ನ ಸ್ವಂತ ಚಿಕ್ಕಪ್ಪ........................


ಅವನು ತೀರಿಹೋದಾಗ ನನಗೆ ೧೦ ವರ್ಷ. ಇಂದಿಗೆ ಅವನು ಸತ್ತು ಸುಮಾರು ೧೫ ವರ್ಷಗಳೇ ಗತಿಸಿದವು. ಯಾಕೋ ಅವನದು ನೆನಪಾಯ್ತು ಅದಕ್ಕೆ ಇದನ್ನು ಮನಸ್ಸು ಬಿಚ್ಚಿ ಬರೆದೆ.

5 comments:

srinivas said...

ಇದು ಕಥೆಯಲ್ಲ ಕಥಾನಕ. ನೈಜ ಘಟನೆಯನ್ನು ಹೃದಯಕ್ಕೆ ಮುಟ್ಟುವಂತೆ ಬರೆದಿದ್ದೀರಿ.
ಇಂತಹದ್ದೇ ಘಟನೆ ಎಲ್ಲರ ಮನೆಗಳಲ್ಲೂ ಒಂದಲ್ಲ ಒಂದು ಬಾರಿ ನಡೆದಿರುತ್ತದೆ. ಆದರೆ ಹೆಚ್ಚಿನವರ್ಯಾರೂ ಬರೆದದ್ದಿಲ್ಲ.
ಬರಹ ಅನವರತ ಸಾಗಲಿ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

ಬ್ರಹ್ಮಾನಂದ ಎನ್.ಹಡಗಲಿ said...

ನಮಸ್ಕಾರ ಶ್ರೀನಿವಾಸ ಅವರಿಗೆ,
ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ನಿಮ್ಮ ಹಾರೈಕೆಗೆ ಧನ್ಯವಾದಗಳು.

ಅರೇಹಳ್ಳಿ ರವಿ Arehalli Ravi said...

ಬ್ರಹ್ಮಾನಂದ ಅವರೆ,
ಒಂದು ಅಪ್ ಡೇಟ್ ನೋಡಿ
ಬ್ಲಾಗೀ ಮಿಲನದ ಫೋಟೋಗಳು…ಜೊತೆಗೆ ಇನ್ನೊಂದು ಸೆನ್ಸೇಷನ್:
Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !

ಜೋಮನ್ said...

ನಮಸ್ಕಾರ

ಆತ್ಮೀಯ ಬ್ರಹ್ಮ,

ಭಾವ ತುಂಬಿದ ಬರಹ.ಹತ್ತು ವರ್ಷದ ಹುಡುಗ ಗಮನಿಸಿ, ನೆನಪಿನಲ್ಲಿಟ್ಟುಕೊಂಡು ಬರೆದ ಬರಹವಾ ಇದು ಅನಿಸಿತು. ತುಂಬಾ ಚೆನ್ನಾಗಿ ಬರೆದಿದ್ದೀಯಾ, ಬರೆಯುತ್ತಲಿರು..

ಧನ್ಯವಾದಗಳು.
ಜೋಮನ್.

ಜಾತ್ರೆ said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ