Monday, October 22, 2007

ಚೆನ್ನೈನಲ್ಲಿ ಕನ್ನಡಿಗರ ದಸರಾ ಹಬ್ಬದ ಸಂಭ್ರಮ


















ಇತ್ತೀಚೆಗೆ ವೆಬ್‌ದುನಿಯಾ ಕಚೇರಿಯಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಂಭ್ರಮಿಸಿದ ಬಗೆಯ ಚಿತ್ರಗಳು..

Sunday, October 21, 2007

ನಾವ್ ನೀವ್ ಬಂಗಾರ್‌ದ್ಹಂಗ್ ಇರೂಣ....


ಬಹುಶಃ ನಾನು ಊರಲ್ಲಿ ಇದ್ದಿದ್ರೆ ವಿಜಯ ದಶಮಿಯನ್ನು ಅಲ್ಲಿಯೇ ಆಚರಣೆ ಮಾಡ್ತಾ ಇದ್ದೆ. ಆದ್ರೆ ಅದಕ್ಕೆ ಕಾಲ ಕೂಡಿ ಬಾರದ್ದರಿಂದ ಚೆನ್ನೈನಲ್ಲಿ ನನ್ನ ಯಾಂತ್ರಿಕ ಜೀವನದಲ್ಲಿಯೇ ಅಲ್ಲಿಯ ಹಬ್ಬದ ಆಚರಣೆ ಬಗೆಯನ್ನು ಜ್ಞಾಪಿಸಿಕೊಂಡು ಈ ಮೂಲಕ ನನ್ನ ಎಲ್ಲ ಮಿತ್ರರಿಗೆ, ಬಂಧು-ಬಾಂಧವರಿಗೆ ಹಾಗೂ ಈ ಬ್ಲಾಗ್ ಓದಿದವರಿಗೂ ಸಹ ವಿಜಯ ದಶಮಿಯ ಶುಭಾಶಯಗಳನ್ನು ಕೋರುತ್ತಿದ್ದೇನೆ.


ಉತ್ತರ ಕರ್ನಾಟಕದಲ್ಲಿ ವಿಜಯ ದಶಮಿ ದಿನದಂದು ಪತ್ರಿ ಹಾಗೂ ಪತ್ರಿಯ ಎಲೆಯನ್ನು ಹಿರಿಯ ಕೊಟ್ಟು ಅವರಿಗೆ ನಮಸ್ಕರಿಸಿ, "ನಾವು ನೀವು ಬಂಗಾರ್‌ದ್ಹಂಗ್ ಇರೂಣ" ಅಂತ ಹೇಳೋದು ಸಾಂಪ್ರದಾಯ. ಅದಕ್ಕೆ ನಾನು ಅಲ್ಲಿಲ್ಲದ್ದರಿಂದ, ಈ ಮೂಲಕ ಎಲ್ಲರಿಗೂ ಇದನ್ನೇ ಹೇಳಲು ಇಚ್ಛಿಸಲು ಬಯಸುವೆ.


'ನಿನ್ನೆಯ ಕಹಿಯನ್ನು ಮರೆಯೋಣ,

ನಾಳೆಯ ಏನಾಗುತ್ತೊ ಎಂಬುವುದನ್ನು ಬಿಡೋಣ

ಇಂದಿನ ಸಂತಸವನ್ನು ಹಂಚಿಕೊಳ್ಳೋಣ'


-ಎಂದು ಹೇಳುತ್ತಾ, ಈ ಬ್ಲಾಗ್ ಓದುಗರಿಗೆ, ಮಿತ್ರರಿಗೆ, ಬಂಧು-ಬಾಂಧವರಿಗೆ ಮತ್ತೊಮ್ಮೆ ವಿಜಯ ದಶಮಿಗಳ ಶುಭಾಶಯ ಕೋರುವೆ.

Wednesday, October 17, 2007

ಬೆಂಚು ಬರಹದ ಬಗ್ಗೆ ಕೊಂಚ ಬರಹ.......


'ಕಂಡಲ್ಲೂ ನೀನೆನೆ... ನಿಂತಲ್ಲೂ ನೀನೆನೆ.. ಎಲ್ಲೆಲ್ಲೂ ನೀನೆ ಕಾಣುವೆ'... ಎಂಬ ಪ್ರೇಮಗೀತೆಯನ್ನು ಸದಾ ಹೃದಯದಲ್ಲಿ ಮಿಡಿಯುವ ಪ್ರೇಮಿಗಳು, ತಮ್ಮ ಪ್ರೀತಿ ನಿಜವಾಗಿಯೂ ಎಷ್ಟು ಪ್ರಭಾವವಾಗಿರುತ್ತೆ ಅಥವಾ ಆಳವಾಗಿರುತ್ತೆ ಎಂಬುವುದನ್ನು ತಾವು ಕೂತ ಬೆಂಚು, ನಿಂತ ನೆಲ, ಓಡಾಡಿದ ಕಲ್ಲುಗಳು ಹೀಗೆ ತಾವೆಲ್ಲಿ ವಿಹರಿಸಿ ಬಂದಿರುತ್ತಾರೋ ಅಲ್ಲೆಲ್ಲ ತಮ್ಮ ಅಮರ ಪ್ರೇಮದ ಅಕ್ಷರಗಳನ್ನು ಮೂಡಿಸುತ್ತಾರೆ (ಇನ್ನೂ ಈ ಪ್ರತೀತಿಯನ್ನು ಮಂದುವರೆಸಿದ್ದಾರೆ).


ತನ್ನ ಹಾಗೂ ತನ್ನ ಪ್ರೇಮಿಯ ಹೆಸರು ಶಾಶ್ವತವಾಗಿರಲಿ ಎಂಬ (ಮೂಢ) ಭಾವನೆಯಿಂದ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಗೋಡೆಗಳ ಮೇಲೆ ತಮ್ಮ ಹೆಸರುಗಳನ್ನು ಪ್ರೇಮಕಾವ್ಯದಂತೆ ಮೂಡಿಸಿ ಬಂದಿರುತ್ತಾರೆ. ಅಬ್ಬಾ! ಇದು ಎಂಥಾ ಪ್ರೀತಿ ಎಂದು ಅದನ್ನು ನೋಡಿದವರಿಗೇ ಅರ್ಥವಾಗಬೇಕು (ತಿಳಿದರೆ ಮಾತ್ರ).


'ಜನ್ಮ ಜನ್ಮಕ್ಕೂ ನೀನೆ ನನ್ನ ಸಂಗಾತಿ', 'ನಿನ್ನನ್ನೇ ಪ್ರೀತಿಸುವ ಇಂತಿ ನಿನ್ನ ಪ್ರಿಯಕರ', 'ಹಲವು ದಿನಗಳ ಗೆಳೆಯಾ ಅಥವಾ ಗೆಳತಿ' ಹೀಗೆ ನಾನಾ ವಿಧಗಳಲ್ಲಿ ತಮ್ಮದೆಯಾದ ವಾಕ್ಯಗಳನ್ನು ಪ್ರೇಮದ ಸಂಕೇತದೊಂದಿಗೆ ಸ್ಥಳಗಳಲ್ಲಿ ಮೂಡಿಸಿರುತ್ತಾರೆ. 'ಇವರೇಕೆ ಹೀಗೆ ನನ್ನ ಮೇಲೆ ಮೂಡಿಸುತ್ತಾರೋ' ಎಂದು ಆ ಗೋಡೆಗಳು ತಮ್ಮಲ್ಲಿಯೇ ಗೊಣಕಿಕೊಳ್ಳುತ್ತಿರುತ್ತವೆ.


ಇದರಲಿ ಬಿಡಿ. ಇದು ಪ್ರೇಮಿಗಳ ಕಥೆಯಾಯಿತು. ಟೈಂ ಪಾಸ್ ಮಾಡುವವರ ಕಥೆಯು ಅದೇ ಆಗಿರುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ಅವರ ಮುಂದಿರುವ ಸೀಟು ಸ್ಪಲ್ಪ ಕಣ್ಣಾಡಿಸಿ ನೋಡಿ (ಸಾಧ್ಯವಾದರೆ, ಕಿಡಿಗಳು ಹಾಗೇ ಬಾತ್ ರೂಮ್ ಕೂಡಾ). ಎನೆಲ್ಲಾ ಗೀಚಿರ್ತಾರೆ. ಇಷ್ಟೇ ಆದ್ರೆ ಓಕೆ ಅನ್ನಬಹುದು. ಆದರೆ, ಅಲ್ಲಿ ಬರೆದಿರುವ ನಿಯಮಗಳನ್ನು 'ತಿದ್ದುಪಡಿ' ಮಾಡಿ ಅದರ ನೈಜ ಅರ್ಥವನ್ನು ಅನರ್ಥ ಬರುವಂತೆ ಮಾಡಿರುತ್ತಾರೆ. ಇದನ್ನು ಬರೆದ ಆ ಮಹಾಪುರುಷ ಎಷ್ಟು ಜಾಣನಿರಬಹುದು ಎಂದು ಅದನ್ನು ಓದಿದವರು ಮನಸ್ಸಿನಲ್ಲಿಯೇ ಮಂದಹಾಸ ಬೀರುವುದನ್ನು ನಾವು ಕಂಡಿದ್ದೇವೆ.


ಹಾಗೆ ಪಾರ್ಕ್‌ಗೆ ಬೆಳಗಿನ ಜಾವ ಜಾಗಿಂಗ್‌ಗೆ ಹೋದಾಗಲೊ ಅಥವಾ ಸಂಜೆ ವಾಕ್ ಹೋದಾಗಲೋ ಕೊಂಚ ಹೊತ್ತು ವಿಶ್ರಾಂತಿ ಪಡೆದುಕೊಳ್ಳಲು ಬೆಂಚುಗಳ ಮೇಲೆ ಕುಳಿತಾಗ ಅಲ್ಲಿಯು ಆ ಮಹಾಪುರುಷರ 'ಅಕ್ಷರ ಕೆತ್ತನೆ' ತಪ್ಪಿರುವುದಿಲ್ಲ. ಒಂದು ಒಳ್ಳೆಯ ವಾಕ್ಯವನ್ನು ಬರೆದಿದ್ದರೆ, ಪರವಾಗಿಲ್ಲ, ಅದರ ಬದಲು ಅವರ ಹೆಸರು ವಿಳಾಸ ಎಲ್ಲ ವಿವರ ನಮೂದಿಸಿ ಬಿಟ್ಟಿರ್ತಾರೆ. ಇನ್ನು ಕೆಲವರು ತಮ್ಮ ಭಾವಚಿತ್ರವನ್ನೆ ಬಿಡಿಸಿರುತ್ತಾರೆ! ಅದು ಅದ್ಭುತ ಕಲೆ.


ಇದು ಬಸ್ಸುಗಳನ್ನು ಬಿಡಲಿಲ್ಲ. ಒಮ್ಮೆ ಬಸ್ಸಿನಲ್ಲಿ ಹೋಗುವಾಗ ಅದರ ಸೀಟಿನ ಹಿಂದೆ ಹೀಗೆ ಬರೆಯಲಾಗಿತ್ತು- 'ಟಿಕೆಟ್ ರಹಿತ ಪ್ರಯಾಣ ಮಾಡಿದಲ್ಲಿ, ಅವರಿಗೆ 500 ರೂಪಾಯಿಗಳ ದಂಡ ವಿಧಿಸಲಾಗುವುದು' ಎಂದಿತ್ತು. ಇದನ್ನು ಯಾರೋ ಒಬ್ಬ, 'ಟಿಕೆಟ್ ಹಿತ ಪ್ರಯಾಣ ರೂಪಾ!' ಎಂದು ಅದರ ಮೂಲರೂಪವನ್ನು ಬದಲಾಯಿಸಿಬಿಟ್ಟಿದ್ದ. ಇನ್ನೊಬ್ಬ 'ಟಿಕೆಟ್ ಹಿತ ಪ್ರಯಾಣ ಮಾಡಿದಲ್ಲಿ, ಅವರಿಗೆ 500 ರೂಪಾಯಿ' ಎಂದಷ್ಟೇ ಬದಲಾಯಿಸಿದ್ದ. ನಿಜಕ್ಕೂ ಇಷ್ಟೊಂದು ಬುದ್ಧಿವಂತರು(!) ಇರ್ತಾರೆಯೇ ಎಂದುಕೊಂಡೆ.


ಕ್ಲಾಸ್ ರೂಮಿನಲ್ಲಿ ಬೆಂಚ್ ಮೇಲೆ ಕೂತಾಗಲು ಕೂಡ ಹಲವಾರು ಬಗೆಯ ವಿಶಿಷ್ಟ ಶೈಲಿಯ ಬರಹಗಳು ಕಾಣ ಸಿಗುತ್ತವೆ (ಕಾಲೇಜು ಜೀವನ ಅನುಭವಿಸಿದ್ದಲ್ಲಿ). ಪ್ರೊಪೆಸ್ಸರ್‌ಗಳ ಪಾಠ ಬೇಜಾರಾದಾಗ ಮುಂದಿರುವುದು ಒಂದೇ ಮಾರ್ಗ. ಅಕ್ಷರಗಳನ್ನು ಬರಿಯೋದು. ಚಿತ್ರ ಬಿಡಿಸೋದು. ಕೆಲವೊಮ್ಮೆ ಚಿತ್ರಗಾರರಿದ್ದರೆ, ಅದೇ ಪ್ರೊಫೆಸ್ಸರ್‌ಗಳು ಬೆಂಚ್ ಮೇಲೆ ಚಿತ್ರವಾಗಿ ಮೂಡಿಬಿಡುತ್ತಾರೆ! (ಆದ್ರೆ ನಾನೇನು ಅಂತಹ ಕಲಾವಿದನಲ್ಲ).


ಇದೆಲ್ಲಕ್ಕಿಂತಲೂ ಹಾಸ್ಟೇಲ್ ಗೋಡೆಗಳು ಇವಕ್ಕೆ ಅತಿಸೂಕ್ತ ಎಂದರೆ, ತಪ್ಪಾಗಲಾರದು. ಎಂತೆಂಥ ಬರಹಗಳು, ಒಂದೊಂದು ಅದ್ಭುತ ಮತ್ತು ಅಷ್ಟೇ ಹಾಸ್ಯಮಯವಾಗಿರುತ್ತವೆ. 'ನನ್ನನ್ನು ನೀವು ಭೇಟಿಯಾಗಬೇಕಿದ್ದರೆ, ಈ ನಂಬರ್‌ನ್ನು ಸಂಪರ್ಕಿಸಿ. ಎಂದು ಬರೆದು ಅವರ ವಿಳಾಸ ಕೂಡ ಬರೆದಿರ್ತಾರೆ' (ಇವರನ್ನು ನಾವ್ಯಾಕೆ ಸಂಪರ್ಕಿಸಬೇಕು. ಹೋಗ್ಲಿ ಯಾಕೆ ಫೋನ್ ಮಾಡಬೇಕು). 'ಇವರು ನನ್ನ ರೂಮ್ ಪಾರ್ಟ್ನರ್‌ಗಳು- ಮುಂದೆ ಅವರ ಹೆಸರು' (ಅವರನ್ನು ತೆಗೆದುಕೊಂಡು ನಾನೇನು ಮಾಡಲಿ).


ಹೀಗೆ ಬೆಂಚು ಬರಹದ ಬಗ್ಗೆ ಹೇಳುತ್ತಾ ಹೋದರೆ, ಅದು ನಿರಂತರ. ರಾಜ ಮಹಾರಾಜರು ತಮ್ಮ ಹೆಸರನ್ನು ಬರೆಸಲು ಈಗಿನಂತೆ ಕಂಪ್ಯೂಟರ್‌ಗಳು, ವೆಬ್‌ಸೈಟ್‌ಗಳು ಇಲ್ಲದ್ದರಿಂದ ಕಲ್ಲಿನ ಮೇಲೆ ಚಿತ್ರಕಾರರ ಮೂಲಕ ತಮ್ಮ ಹೆಸರನ್ನು ಬರೆಸುತ್ತಿದ್ದರು ಎಂಬುದನ್ನು ನಾವು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಅವರಂತೆಯೇ ನಮ್ಮ ಹೆಸರು ಕೆತ್ತನೆಯಲ್ಲಿ ಬಾರದಿದ್ದರೂ ಪರವಾಗಿಲ್ಲ. At least ಈ ಬರಹದ ಮೂಲಕವಾದರೂ, ಇಲ್ಲಿ ಒಡಮೂಡಲಿ ಎಂಬ ಭಾವನೆ ಈಗಿನ ಜನರದ್ದು. ಹೀಗಾಗಿ ತಾವು ಎಲ್ಲಿಗಾದರೂ ಭೇಟಿ ನೀಡಿದಾಗ ಅಥವಾ ಎಲ್ಲಿಯಾದರೂ ಕೂತಾಗ (ಖಾಲಿ) ಇಂತಹ ಕಾರ್ಯಕ್ಕೆ ಮುಂದಾಗುವುದು ಸಹಜ.

Tuesday, October 9, 2007

ಹಲವು ಸೋಲುಗಳ ಮರೆಸುವ ಒಂದು ಗೆಲುವು.......

ಭಾರತ ಕ್ರಿಕೆಟ್ ತಂಡ ಯಾವಾಗ ಏನಾಗುತ್ತೆ ಎಂಬುದು ಗೊತ್ತಾಗುವುದಿಲ್ಲ. ಮೇಲಿಂದ ಮೇಲೆ ಸೋಲು ಕಂಡ ನಂತರ ಒಂದುಸಲ ಜಯ ತಂದುಕೊಂಡರೆ, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನ ತಣಿಸುವ ಶಕ್ತಿ ಅದಕ್ಕಿದೆ ಎಂದರೆ ಅಚ್ಚರಿಪಡಬೇಕಿಲ್ಲ. ಆದರೂ, ಇದು ಸತ್ಯ.

ಕೆರಿಬಿಯನ್‌ನಲ್ಲಿ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ "ನಾವು ಗೆದ್ದೆ ಗೆಲ್ಲುತ್ತೇವೆ" ಎಂಬ ಅತಿಯಾದ ಆತ್ಮವಿಶ್ವಾಸದೊಂದಿಗೆ ಭಾರತ ಕ್ರಿಕೆಟ್ ಕಲಿಗಳು ತೆರಳಿದರು. ಆದರೆ ಆಗಿದ್ದೇನು? ಪಕ್ಕದ ಬಾಂಗ್ಲಾದೇಶಕ್ಕೆ ಮಣಿದಿದ್ದು. ಇದು 'ಹುಲಿಯನ್ನು ಹೊಡೆಯಲು ಹೋದ ಶೂರ, ಹಾದಿಯಲ್ಲಿದ್ದ ನಾಯಿಯನ್ನು ನೋಡಿ ಅಂಜಿದನಂತೆ' ಎಂಬಂತಾಗುತ್ತದೆ. ಇದು ಪರಿಹಾಸ್ಯವಲ್ಲ. ಆದ ನೈಜ ಘಟನೆಯ ಮುಂದಿರುವ ಕನ್ನಡಿ. ಅದರಲ್ಲಿ ಸತ್ಯವಷ್ಟೇ ಕಾಣಬೇಕು.

ಇಂತಹ ಸೋಲನ್ನು ಕಂಡ ಭಾರತ ದುರ್ಬಲ ಬರ್ಮುಡಾ ತಂಡವನ್ನು ಮಣ್ಣು ಮುಕ್ಕಿಸಿ, ಟೂರ್ನಿಯ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಆದರೆ, ಕೊನೆಯ ಶ್ರೀಲಂಕಾ ಪಂದ್ಯದಲ್ಲಿ ಸೋಲನುಭವಿಸಿ, ಸ್ವದೇಶಕ್ಕೆ ಮರಳಿದ ಭಾರತ ತಂಡಕ್ಕೆ ಸಿಕ್ಕಿದ್ದು, ಅಗೌರವ, ಟೀಕೆ!

ಬಿಸಿಸಿಐ ಕೂಡ ಭಾರತದ ಕ್ರಿಕೆಟ್ 'ಹುಲಿ'ಗಳಿಗೆ ಮೂಗುದಾರ ಹಾಕಲು ಹೊರಟರು. ಇದನ್ನು ಸಹಿಸಿಕೊಂಡ ಭಾರತ ತಂಡದ ಆಟಗಾರರು ಮುಂದಿನ ಬಾಂಗ್ಲಾದೇಶ ಸರಣಿ ಹಾಗೂ ದ.ಆಫ್ರಿಕಾ ಸರಣಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ವಿಶ್ವಕಪ್ ಸೋಲನ್ನು ಕೊಂಚ ಮರೆಯಾಗಿರಿಸಿದರು.

ಇದಾದ ನಂತರ ಇಂಗ್ಲೆಂಡ್‌ ಸರಣಿಯಂತೂ ಭಾರತೀಯ ಕ್ರಿಕೆಟ್ ತಂಡದ ಪಾಲಾಗಿ ವರವಾಗಿ ಒದಗಿತು. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತೆ ಹೊಸ ಚಲನೆಯನ್ನುಂಟು ಮಾಡಿತು. ಇದು ಹೋಗಲಿ ಬಿಡಿ. ಹಳೆಯ ಮಾತು.

ಹಿರಿಯರಿಲ್ಲದ ಯುವಪಡೆಯು ದ.ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ದ.ಆಫ್ರಿಕಾ ತಂಡಗಳನ್ನೇ ಮಣಿಸಿ ಪ್ರಶಸ್ತಿಯನ್ನು ತಾಯ್ನೆಲಕ್ಕೆ ಹೊತ್ತು ತಂದರು. ಆಗ ಭಾರತದಲ್ಲಿ ಉಂಟಾದ ಸಂತಸ, ಸಂಭ್ರಮ ಅಷ್ಟಿಷ್ಟಲ್ಲ. ಅವರ ಸಂತಸಕ್ಕೆ ಅಪಾರವೇ ಇಲ್ಲದಂತಾಯಿತು. ಈ ವಿಶ್ವಕಪ್ ಭಾರತೀಯ ಕ್ರಿಕೆಟ್ ರಂಗಕ್ಕೆ ಮತ್ತೊಂದು ಶಿಖರವನ್ನು ನೀಡಿತೆಂದರೆ, ಅತಿಶಯೋಕ್ತಿಯೇನಲ್ಲ.

ಈಗ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಆಗಮಿಸಿದೆ. ಇದರಲ್ಲಿ ಈಗಾಗಲೇ ಭಾರತ ತಂಡವು ಆರಂಭದಲ್ಲಿ ಪರಾಭವಗೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಕಹಿ ಅನುಭವ ಪಡೆದ ದೋನಿ ಪಡೆ, ಚಂಡೀಗಢದಲ್ಲಿ ನಡೆದ ಮೊದಲ ಗೆಲುವು ಕಳೆದೆರಡು ಸೋಲುಗಳ ಕಹಿಯನ್ನು ಮರೆಸಿದೆ. ಸೋಲು ಗೆಲುವಿನ ಸೋಪಾನ ಎಂಬ ಮಂತ್ರವನ್ನು ಜಪಿಸುತ್ತಿರುವ ಭಾರತ ತಂಡ ಮುಂದೇನಾಗುತ್ತೆ.....