Wednesday, November 21, 2007

ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ...

ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ ನಮ್ಮ ಹಾಗೂ ಅವರ ಮಧ್ಯೆ ಉಳಿಯುವುದು ಒಂದೇ ಅದುವೇ "ಸ್ನೇಹ". ನಿಜ. ನಮಗೆ ಯಾರಾದರೊಬ್ಬರು ಹೊಸದಾಗಿ ಪರಿಚಿತವಾದಾಗ, ಅವರೊಟ್ಟಿಗೆ ಹೇಗೆ ನಡೆದುಕೊಳ್ಳುವುದು, ಯಾವ ರೀತಿಯಾಗಿ ಅವರನ್ನು ಕಾಣಬೇಕೆಂಬ ಹಲವು ಪ್ರಶ್ನೆಗಳು ನಮ್ಮ ಮನದಲ್ಲಿ ಕಾಡತೊಡಗುತ್ತವೆ. ಕಾರಣ, ಆ ಅಪರಿಚಿತ ವ್ಯಕ್ತಿ ನಮಗೆ ಹತ್ತಿರವಾಗಿರುವುದಿಲ್ಲ ಎಂಬುದು ಒಂದು ಕಾರಣವಾದರೆ, ಇದೇ ಮೊದಲ ಬಾರಿಗೆ ಅವರ ಮುಖಚರ್ಯೆ ನನಗಾಗುತ್ತಿರುವುದು ಎಂಬುದು ಇನ್ನೊಂದು ಕಾರಣವಾಗಿದೆ.

ಕಾಲೇಜು ದಿನಗಳಲ್ಲಿಯಾದರೆ, ಅವರೊಟ್ಟಿಗೆ ಬೇಗನೆ ಹೊಂದಿಕೊಳ್ಳುವುದು ಕಷ್ಟತರವೇನಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದ ಮಾತು. ಆದರೆ, ಅದೇ ಅವರು ವೃತ್ತಿರಂಗದಲ್ಲಿ ಹೊಸದಾಗಿ ಪರಿಚಿತವಾದರೆ, ನಮ್ಮನ್ನು ಚಿಂತೆಯ ಅವಗಾಹನೆಗೆ ಎಡೆ ಮಾಡಿಕೊಡುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಅಂತಹ ವ್ಯಕ್ತಿ ಹಾಗೂ ನಮ್ಮ ನಡುವೆ "ಹೊಂದಾಣಿಕೆ" ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಸಹಜ. ಈ ಹೊಂದಾಣಿಕೆ ಅದು ವೃತ್ತಿ ಬದುಕಲ್ಲಾಗಬಹುದು, ಅವರ ಭಾಷೆಯಲ್ಲಾಗಹುದು, ವ್ಯಕ್ತಿತ್ವದಲ್ಲಾಗಬಹುದು ಅಥವಾ ಅವರ ಮನೋ ಇಚ್ಛೆಯಲ್ಲಾಗಬಹುದು. ಕೆಲವೊಮ್ಮೆ ಈ ಹೊಂದಾಣಿಕೆಯು ಅಪಾರ್ಥಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯು ಉಂಟು.

ಆದರೆ, ಹೊಂದಾಣಿಕೆ ಏಕಮಾರ್ಗವಾಗಿ ಬಂದರೆ, ಅದು ಅಷ್ಟೊಂದು ಸಮಂಜಸ ಅನಿಸುವುದಿಲ್ಲ. ಅದು ದ್ವಿಮುಖವಾಗಿಯೂ ಬಂದರೆ, ತುಂಬಾ ಒಳಿತು ಎಂಬುವುದು ಪ್ರಜ್ಞಾವಂತ ಓದುಗರ ಅಭಿಪ್ರಾಯ ಅಂಬೋಣ. ಇಂತಹ ಹೊಂದಾಣಿಕೆಯಾದ ಮೇಲೆಯೂ ಅವರು ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾರೆಯೇ ಎಂಬ ಪ್ರಶ್ನೆ ನಮ್ಮ ಮುಂದೆ ಕಾಡುತ್ತದೆ. ಖಂಡಿತ ಎಂಬುದು ನನ್ನ ದಿಟ್ಟ ಉತ್ತರ.

ಆದರೆ, ಅಂತಹ ವ್ಯಕ್ತಿ ದಿನನಿತ್ಯ ನಮ್ಮ ಬದುಕಿನಲ್ಲಾಗುವ (ವೃತ್ತಿ ಬದುಕು ಒಳಗೊಂಡಂತೆ) ಪ್ರತಿಯೊಂದು ಘಟನೆಯಲ್ಲಿ ಪಾಲ್ಗೊಂಡಾಗ ಹಾಗೂ ಸಮಸ್ಯೆಯೊಂದು ನಮ್ಮ ಮುಂದೆ ದಿಢೀರ್‌ನೆ ಪ್ರತ್ಯಕ್ಷವಾದಾಗ ಅಂತಹ ವ್ಯಕ್ತಿಗಳ ಎದುರು ಮನಸ್ಸು ಬಿಚ್ಚಿ ಮಾತನಾಡಲು ಯಾವ ಭಯ, ಅಂಜಿಕೆ ಇರುವುದಿಲ್ಲ. ಹೀಗಾಗಿ ಅವರು ನಮಗೆ ಆಪ್ತರಾಗುತ್ತಾರೆ ಎಂಬುದು ವಾದ.

ದಿನನಿತ್ಯದ ನಮ್ಮ ಕಾರ್ಯಗಳಲ್ಲಿ ನಮಗೆ ಸ್ನೇಹಿತರಂತೆ ಸಲಹೆ, ಕಷ್ಟಗಳಲ್ಲಿ ಏನೋ ಸಂಬಂಧದಲ್ಲಿ ಭಾಗಿಯಾಗಿ ಭಾವನಾತ್ಮಕವಾಗಿ ಸಂಬಂಧಕ್ಕೆ ತಿರುಗಿದಾಗ ಅವರನ್ನು ಬಿಟ್ಟಿರಲು ಅಥವಾ ದೂರವಾಗಿಸಿಕೊಳ್ಳಲು ಯಾರು ಇಚ್ಛಿಸುವುದಿಲ್ಲ.

ಇಂತಹ ವ್ಯಕ್ತಿಯೊಬ್ಬರು ಒಮ್ಮೆಲೆ ದೈಹಿಕವಾಗಿ ದೂರವಾಗುತ್ತಾರೆ ಎಂಬ ಸುದ್ದಿ ಕೇಳಿದಾಗ, (ಕಾಲೇಜಿನಲ್ಲಿ ನೀವು ಕೊನೆಯ ಗಳಿಗೆಯಲ್ಲಿ ನಿಮ್ಮ ಸ್ನೇಹಿತರ ಅಥವಾ ಸ್ನೇಹಿತೆಯರು ನಿಮ್ಮನ್ನು ಅಗಲುತ್ತಿದ್ದಾರೆ ಎನ್ನುವಂತೆ ಅನುಭವವಾಗುತ್ತದೆ) ಮನಸ್ಸಿಗೆ ಏನೋ ಒಂದು ಕಸಿವಿಸಿ, ಕೆಲಸದಲ್ಲಿ ನಿರುತ್ಸಾಹ ಜೊತೆಗೆ ಮನಸ್ಸಿಗೆ ಹತ್ತಿರವಾದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತೆ ಭಾಸ. ಅಲ್ಲದೆ ಮನಸ್ಸು ಏನನ್ನೊ ಯೋಚಿಸುತ್ತಿರುವ ಹಾಗೆ ಕೆಲಸದಲ್ಲಿ ನಿರಾಸಕ್ತಿ ತೋರಿ ಯಾವುದೋ ಚಿಂತೆಯಲ್ಲಿ ಮಗ್ನವಾಗುತ್ತದೆ.

ಪ್ರತಿನಿತ್ಯ ಒಡನಾಟದಲ್ಲಿದ್ದ, ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ದಿಢೀರನೆ ಮಾಯವಾದಾಗ. ಆಗುವ ಸಂಕಟ, ನೋವು ಅದನ್ನು ಅನುಭವಿಸಿದವನಿಗೆ ತಿಳಿದಿರಬೇಕು. ಇಂತಹ ಆಲೋಚನೆಯನ್ನು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಇಂತಹ ಅಗಲುವಿಕೆಯನ್ನು. ಇದು ನನ್ನ ಅನುಭವಕ್ಕೂ ಹೊರತಾಗಿಲ್ಲ ಎಂಬುದು ಇನ್ನೊಂದು ಕಟು ಸತ್ಯವಾದ ಮಾತು.

ಒಂದು ಗಿಡವನ್ನು ನೆಡುವುದು ಸಾಮಾನ್ಯವಾದ ವಿಷಯವಲ್ಲ. ಅದನ್ನು ಬೆಳೆಸಿ ದೊಡ್ಡ ಮರವನ್ನಾಗಿ ಮಾಡುವುದು ಅದರ ಮುಂದಿನ ಗುರಿಯಾಗಿರುತ್ತದೆ. ಅಂತೆಯೇ ಅಂತಹ ವ್ಯಕ್ತಿಗಳು ಕೆಲವೇ ದಿನಗಳವರೆಗೆ ನಮ್ಮ ಸಂಗಡ ಇದ್ದರೂ, ಅವರೊಂದಿಗೆ ಮಾಡಿಕೊಂಡ ಸ್ನೇಹ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಮುಂದಿರುವ ಗುರಿಯಾಗಿರುತ್ತದೆ. ಆದರೆ, ಇದು ಅನಿವಾರ್ಯವಲ್ಲ. ಅಪೇಕ್ಷಿತವಾದದು. ಕಾರಣ ಅವರ ವ್ಯಕ್ತಿತ್ವವೇ ಅಂತಹದ್ದಾಗಿರುತ್ತದೆ.

2 comments:

ಸತೀಶ್ said...

ಲೇಖನ ತುಂಬ ಉತ್ತಮವಾಗಿ ಮೂಡಿ ಬಂದಿದೆ ಸಂಶಯವಿಲ್ಲ. ಮನಸ್ಸಿಗೂ ಬುದ್ದಿಗೂ ಹತ್ತಿರವಾದವರೂ ಇನ್ನಿಲ್ಲ ಎಂದ ಮೇಲೆ ಶೂನ್ಯತೆ ಆವರಿಸಿಕೊಳ್ಳುತ್ತದೆ. ಭಗವಧ್ ಗೀತೆಯಲ್ಲಿ ಒಂದು ವಾಕ್ಯ ಇದೆ. ಜನ್ಮಸ್ಯ ಮರಣಂ ದ್ರುವಿಣಂ. ಹುಟ್ಟಿದವ ಸಾಯಲೇಬೇಕು.ಹತ್ತಿರವಾದವ ಇಂದಲ್ಲ ನಾಳೆ ದೂರವಾಗಲೇ ಬೇಕು. ಆದರೆ ಅಂವ ಬಿಟ್ಟ ನೆನಪುಗಳು ಇವೇಯಲ್ಲ ಅವುಗಳೇ ಸಾಕು ಬದುಕಲು.

jomon varghese said...

ಉತ್ತಮ ಸ್ನೇಹಿತರು ಎಂದಿಗೂ ದೂರವಾಗುವುದಿಲ್ಲ. ದೈಹಿಕವಾಗಿ ದೂರವಾದರೂ,ಭಾವನಾತ್ಮಕವಾಗಿ ಅವರು ಎಂದಿಗೂ ಜೊತೆಗಿರುತ್ತಾರೆ. ಅಂತಹ ನೆನಪುಗಳ ಅನುಭೂತಿಯೇ ವಿಶಿಷ್ಠವಾದದ್ದು.

ಪ್ರೀತಿಯಿಂದ,
ಜೋಮನ್