Thursday, November 1, 2007

ಸ್ಫೂರ್ತಿ ನೀಡಿದ ಅಜ್ಜಿಗೆ ನನ್ನ ನಮನ...


ಆಗತಾನೆ ನಾನು ಡಿಗ್ರಿಯನ್ನು ಮುಗಿಸಿದ್ದೆ. ಮುಂದೇನು ಮಾಡಬೇಕು ಎಂದು ಸ್ಪಷ್ಟ ನಿರ್ಧಾರವಿರಲಿಲ್ಲ. ಭವಿಷ್ಯದ ನಿರ್ಮಾಣಕ್ಕಾಗಿ ಯಾವ ದಾರಿಯನ್ನು ಅರಿಸಿಕೊಂಡು ಹೋದರೆ ಉತ್ತಮ ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು. ಕಾಲೇಜಿನಲ್ಲಿ ಕಲಿಸಿದ ಅಧ್ಯಾಪಕರುಗಳ ಸಲಹೆಯನ್ನು ಕೇಳಿದೆ. ಕೆಲವರಿಂದ ಉಪಯುಕ್ತ ಸಲಹೆ ಬಂತು. ಮತ್ತೆ ಕೆಲವರಿಂದ ಬಂದ ಉತ್ತರ ನನಗೆ ಸೂಕ್ತ ಎಂದು ತೋರಲಿಲ್ಲ.


ನಾನು ಕೊನೆಗೆ ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಪತ್ರಿಕೋದ್ಯಮ ಮತ್ತು ಗ್ರಂಥಾಲಯ ವಿಜ್ಞಾನ ಅಗ್ರ ಸ್ಥಾನದಲ್ಲಿದ್ದವು. ಆದರೆ, ಈ ಕೋರ್ಸಿಗೆ ಏನು ಮಾಡಬೇಕೆಂದು ಗೊಂದಲಕ್ಕೊಳಗಾದಾಗ ನನ್ನ ಆತ್ಮೀಯ ಮಿತ್ರನೊಬ್ಬ ನನಗೆ ಸಹಾಯ ಮಾಡಿದ. ನಾನು ಆತನನ್ನು ಸಹಾಯ ಕೇಳಿರಲಿಲ್ಲ. ನನ್ನ ಪರಿಸ್ಥಿತಿ ಅರಿತುಕೊಂಡು ಆತನಾಗಿಯೇ ಮುಂದೆ ಬಂದು ಸಹಾಯ ಮಾಡಿದ. ಅವನದು ದೊಡ್ಡ ಗುಣ. ಮುಂದೆ ಆತನೂ ನನ್ನೊಂದಿಗೆ ಸೇರಿ ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯ ಒಂದರಲ್ಲಿ ಪ್ರವೇಶ ಪರೀಕ್ಷೆ ಬರೆದೆ. ಕೊನೆಗೂ ನಾನು ಇವೆರಡರಲ್ಲಿಯೂ ನನಗೆ ಸೀಟು ಸಿಕ್ಕಿತು!


ಬಹುಶಃ ನಾನು ಈ ಸೀಟು ತೆಗೆದುಕೊಳ್ಳಲು ನೀವು ಆ ಸ್ನೇಹಿತ ನನಗೆ ಎಷ್ಟು ಕಾರಣವಾಗಿದ್ದಾನೆಯೊ ಅಷ್ಟೇ ಪ್ರಮಾಣದಲ್ಲಿ ಒಂದು ಹಿರಿಯ ಜೀವ ನನ್ನ ಸ್ಫೂರ್ತಿ ನೀಡಿದ್ದರು. ನಾನು ಡಿಗ್ರಿ ಮುಗಿಸಿಕೊಂಡೆ. ಮುಂದೇನು ಮಾಡಬೇಕು ಎಂದು ಲೆಕ್ಕಾಚಾರ ಹಾಕುವಷ್ಟರಲ್ಲಿ ನನ್ನ ಮನೆತನದ ಆರ್ಥಿಕ ಪರಿಸ್ಥಿತಿ ನೆನಪಾಗಿ 'ನನ್ನ ಓದಿಗೆ ಪೂರ್ಣವಿರಾಮ ನೀಡಿ, ಯಾವುದಾದರೂ ಕೆಲಸ ಮಾಡಬೇಕೆಂಬ' ನಿರ್ಧಾರಕ್ಕೆ ಬಂದೆ. ನನ್ನ ನಿರ್ಧಾರದ ವಿಚಾರವನ್ನು ನಾನು ಮನೆಯಲ್ಲಿ ಹೇಳಲು ಹೋಗಲಿಲ್ಲ.


ಒಮ್ಮೆ ಅನಿವಾರ್ಯ ಕಾರಣಗಳಿಂದ ನಾನು ನನ್ನ ಅಜ್ಜಿಯ ಊರಿಗೆ ಹೋಗಬೇಕಾಯಿತು. ಆದರೆ, ಅಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು! ಬಹುಶಃ ಅಜ್ಜಿಗೆ ನನ್ನ ನಿರ್ಧಾರದ ಬಗ್ಗೆ ಹೇಗೊ ತಿಳಿದಿರಬೇಕು. ನನ್ನನ್ನು ಹತ್ತಿರದಲ್ಲಿಯೇ ಕೂಡಿಸಿಕೊಂಡು 'ನೀನು ಮುಂದೆ ಏನು ಓದಬೇಕಂತ್ ತೀರ್ಮಾನ ಮಾಡಿದಿ' ಅಂದ್ಲು. ನಾನು ನನ್ನ ಓದಿನ ವಿಚಾರ ಲಹರಿಗಳನ್ನು ಹರಿಯಬಿಟ್ಟೆ. ನಂತರ ಆ ಹಿರಿಯ ಜೀವ ಹೇಳಿದ್ದೆನು ಗೊತ್ತೆ 'ನೋಡು ನೀನು ಏನ್ ಬೇಕಾದ್ ಕಲಿ, ಎಷ್ಟ್ ಖರ್ಚಾದ್ರು ಪರವಾಗಿಲ್ಲ. ಅದನ್ ನಾನ್ ಕೊಡ್ತಿನಿ' ಅಂದ್ರು.


ಅಜ್ಜಿಯ ಪ್ರತಿಯೊಂದು ಮಾತುಗಳನ್ನು ಕೇಳುತ್ತಾ ಹೊರಟ ನನಗೆ, ನನಗೇ ಗೊತ್ತಿಲ್ಲದ ಹಾಗೆ ನನ್ನ ಕಣ್ಣುಗಳು ಒದ್ದೆಯಾಗಿ ಕಣ್ಣೀರ ಹನಿಗಳು ಕಪಾಳಕ್ಕೆ ತಾಗಿದ್ದವು. ಅಜ್ಜಿ ನನ್ನ ಜೀವನಕ್ಕೆ ಇಷ್ಟೊಂದು ತಿರುವು ನೀಡ್ತಾರೆ ಅಂತ ನಾನು ಯಾವತ್ತಿಗೂ ನಿರೀಕ್ಷೆ ಮಾಡಿರಲಿಲ್ಲ. ನಿಜಕ್ಕೂ ನಾನು ಈ ಊರಿಗೆ ಬಂದ ಕಾರ್ಯ ಫಲಿಸಿತು ಅಂತ್ ಮನಸ್ಸಿನಲ್ಲಿಯೇ ಅಂದುಕೊಂಡು, ಅಜ್ಜಿಯ ಪ್ರತಿಯೊಂದು ಮಾತುಗಳನ್ನು ಸವಾಲಾಗಿ ಸ್ವೀಕರಿಸಿದೆ.


ನಿಜ ಹೇಳಬೇಕಂದ್ರೆ ನನ್ನ ಅಜ್ಜಿ ಸಾಲಿ ಕಟ್ಟೆಯನ್ನೂ ಹತ್ತಿಲ್ಲ. ಯಾವ ವಿಶ್ವ ವಿದ್ಯಾಲಯದಿಂದ ಯಾವ ಪದವಿಯನ್ನು ಪಡೆದುಕೊಂಡಿಲ್ಲ. ಆದರೆ, ಅವರು ಜೀವನದಲ್ಲಿಯೇ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಿದ್ದಾರೆ. ಇದರಿಂದ ಪಡೆದ ಅನುಭವಗಳೇ ಪ್ರಮಾಣಪತ್ರ. ಅಷ್ಟೇ ಅಲ್ಲ, ಕಷ್ಟಕಾಲ, ಬರಗಾಲ ಪರಿಸ್ಥಿತಿಯಲ್ಲಿಯೂ ತಮ್ಮ ಸಂಸಾರದ ಬಂಡಿಯನ್ನು ನೂಕಿರುವ ಕುರಿತು ನನ್ನ ಅಮ್ಮ ನನಗೆ ಹೇಳುತ್ತಿದ್ದನ್ನು ಕೇಳಿ, ನನ್ನ ಈ ಸಮಸ್ಯೆ ಯಾವ ಲೆಕ್ಕವೂ ಅಲ್ಲ ಅಂತ ಅನಿಸ್ತು. ನಿಜಕ್ಕೂ ಆ ಅಜ್ಜಿಯ ಅನುಭವಗಳು ನನ್ನನೊಮ್ಮೆ ಚಿಂತೆನೆಗೆ ಈಡು ಮಾಡಿದವು.


ನನಗೆ ಮುಂದೆ ಏನು ಮಾತಾಡ್ಬೇಕು ಅಂತಾ ಹೊಳೆಯದೆ ಹಾಗೆ ಸುಮ್ಮನೆ ಗೋಣು ಅಲ್ಲಾಡಿಸಿದೆ. ಅದೇ ಒಂದು ಮಾತು ನಾನು ಮತ್ತೆ ಓದನ್ನು ಮುಂದುವರೆಸಲು ಸ್ಫೂರ್ತಿಯಾಯಿತು. ಹಣವನ್ನು ಹಾಗೋ ಹೀಗೋ ಮಾಡಿ ಕೂಡಿಸಿ, ವಿಶ್ವವಿದ್ಯಾಲಯದ ವೃತ್ತಿಪರ ಕೋರ್ಸ್‌ವೊಂದಕ್ಕೆ ಕೊನೆಗೂ ಪ್ರವೇಶಾತಿಯನ್ನು ಪಡೆದೆ. ಇದರಿಂದಲೇ ನನ್ನ ಜೀವನ ರೂಪಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬಂದೆ. ಆಗ ನನ್ನ ದೃಢ ನಿರ್ಧಾರ ಬದಲಾವಣೆಯಾಗಿ ಓದಿನಲ್ಲಿ ಹೆಚ್ಚು ಆಸಕ್ತಿ ಹಾಗೂ ವಿಶ್ವಾಸ ಮತ್ತಷ್ಟು ಹೆಚ್ಚಿತು.


ಮುಂದೆ ನನ್ನ ಓದು ಆರ್ಥಿಕ ಸಮಸ್ಯೆಗಳ ನಡುವೆಯೇ ಮುಂದುವರೆಯಿತು. ಆದ್ರೆ ಅದಕ್ಕೆ ಹಣದ ನೆರವನ್ನು ಕೊಡುವುದರ ಜೊತೆಗೆ ಮಾನಸಿಕ ಸ್ಥೈರ್ಯವನ್ನು ತುಂಬಿದ್ದ ಅಜ್ಜಿಯ ಮಾತನ್ನು ಕೊನೆಗೂ ನಾನು ಈಡೇರಿಸಿದೆ. ಈಗ ಎರಡು ವರ್ಷಗಳ ವೃತ್ತಿಪರ ಕೋರ್ಸ್‌ನ್ನು ಯಶಸ್ವಿಯಾಗಿ ಪೂರೈಸಿರುವ ನಾನು, ಹೆಸರಾಂತ ಐಟಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.


ಓದನ್ನು ಅರ್ಧಕ್ಕೆ ನಿಲ್ಲಿಸಿ, ದುಡಿಯಬೇಕೆಂಬ ನಿರ್ಧಾರ ಕೈಗೊಂಡಿದ್ದಾಗ, ಆ ಹಿರಿಯ ಅನುಭವಿ ಜೀವ ನನ್ನಲ್ಲಿ ಸ್ಫೂರ್ತಿ ತುಂಬಿ ನನ್ನ ಜೀವನಕ್ಕೆ ಒಂದು ಅರ್ಥ ಬರುವಂತೆ ಮಾಡಿದ್ದಾರೆ. ಅವರು ಕೂಡ ಹಲವಾರು ತಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಅನುಭವಿಸಿ ಬಂದವರು. ಅವರ ಅನುಭವಕ್ಕೆ, ಸ್ಫೂರ್ತಿ ಚಿಲುಮೆಗೆ ನಾನು ಋಣಿಯಾಗಿದ್ದೇನೆ.


ಈಗಲೂ ಕೂಡ ನಾನು ಊರಿಗೆ ಹೋದಾಗಲೊಮ್ಮೆ ಅಜ್ಜಿಯನ್ನು ಕಂಡು ಬರುತ್ತೇನೆ. ಪ್ರತಿಸಲ ಅವರ ಕಣ್ ಜೇನ ಹನಿಯನ್ನು ನೋಡಿದಾಗ ನೂರು ಕಥೆಗಳನ್ನು ಹೇಳುತ್ತಿರುವಂತಿವೆ. ಅವರ ಅನುಭವ, ಅವರ ವಿಚಾರ ಸಾಮರ್ಥ್ಯ, ಬದುಕಿನ ಹೋರಾಟ, ಮೊಮ್ಮಕ್ಕಳ ಬಗ್ಗೆ ಇರುವ ಇನ್ನೂ ವಿಶೇಷ ಕಾಳಜಿಯನ್ನು ನೋಡಿದರೆ, ನಾನು ಜೀವನದಲ್ಲಿ ಇನ್ನೂ ಬಹಳಷ್ಟು ಸಾಧನೆ ಮಾಡಬೇಕೆಂಬ ಆಸೆ ಹುಟ್ಟುತ್ತದೆ.


ಹೋರಾಟದ ಬದುಕು ನಮ್ಮ ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿಸುತ್ತದೆ. ಆದರೆ, ಇಂತಹ ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ, ಅವುಗಳಿಗೆ ಪರಿಹಾರ ಇಲ್ಲವೇನೋ ಎಂಬ ಮನೋವ್ಯಾಧಿಯಂತೆ ಚಿಂತಿಸ ತೊಡಗುತ್ತೇವೆ. ಕೆಲವೊಮ್ಮೆ ಇಂತಹ ಸಮಸ್ಯೆಗಳಿಗೆ ಅನುಭವಗಳೆಂಬ ಔಷಧಿಯು ಪರಿಹಾರವಾಗಿ ಒದಗಬಲ್ಲುದು. ಅದಕ್ಕೆ ಇಂತಹ ಅನುಭವಿಗಳ ಸ್ಫೂರ್ತಿಯೇ ಕಾರಣವಾಗಬುಹುದಲ್ಲವೇ............

4 comments:

ಮಲ್ಲಿಕಾಜು೯ನ ತಿಪ್ಪಾರ said...

ಬ್ರಹ್ಮ ನಿಜವಾಗಿಯೂ ಕಣ್ಣು ತೇವುಗೊಳ್ಳುವಂತ ಹೃದಯಸ್ಪರ್ಷಿ ಬರಹ...

Srinidhi said...

ನಿಮ್ಮ ಸ್ಥೈರ್ಯಕ್ಕೆ ನನ್ನ ಅಭಿನಂದನೆಗಳು! ಇನ್ನಷ್ಟು ಯಶಸ್ಸು ನಿಮ್ಮದಾಗಲಿ!

ಅಂದಹಾಗೆ ನಾಗೇಶ ಹೆಗಡೆಯವರು ನಿಮ್ಮ ಶುಭಾಶಯಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.

nagendra said...

ನಾಗೇಂದ್ರ ತ್ರಾಸಿ....

ಹಿರಿಯ ಜೀವಗಳ ಸ್ಫೂರ್ತಿ ಯಾವತ್ತೂ ಮರೆಯಲಾಗದ ಅನುಭವ.ನಿಮ್ಮ ಜೀವನದ ಯಶಸ್ಸಿನ ಪ್ರಯಾಣಕ್ಕೆ ಹೆಗಲುಕೊಟ್ಟ ಅಜ್ಜಿಯನ್ನು ಹೃತೂರ್ವಕವಾಗಿ ನೆನಪಿಸಿಕೊಂಡ ಲೇಖನ ಶ್ಲಾಘನೀಯವಾಗಿದೆ.

jomon varghese said...

ಆತ್ಮೀಯ ಬ್ರಹ್ಮ...
ಮನುಷ್ಯ ಓದಿನ ಮೂಲಕ ಡೆದುಕೊಂಡ ಜ್ಞಾನದಷ್ಟೇ,ಅನುಭವದ ಮೂಲಕ ಪಡೆದುಕೊಂಡ ಅರಿವೂ ಮುಖ್ಯವಾದುದು.

ನಿಮ್ಮ ಅಜ್ಜಿ ವಿಶ್ವವಿದ್ಯಾಲಯದಲ್ಲಿ ಓದಿಲ್ಲದಿರಬಹುದು. ಆದರೆ ಅವರ ಜೀವನಾನುಭವವೇ ನಿಮಗೆ ಸ್ಫೂರ್ತಿ..

ಹೃದಯಸ್ಪರ್ಶಿ ಲೇಖನ. ಯಾಕೋ ಕಣ್ಣಿಂಚು ಹನಿಗೂಡಿತು..