
'ಕಂಡಲ್ಲೂ ನೀನೆನೆ... ನಿಂತಲ್ಲೂ ನೀನೆನೆ.. ಎಲ್ಲೆಲ್ಲೂ ನೀನೆ ಕಾಣುವೆ'... ಎಂಬ ಪ್ರೇಮಗೀತೆಯನ್ನು ಸದಾ ಹೃದಯದಲ್ಲಿ ಮಿಡಿಯುವ ಪ್ರೇಮಿಗಳು, ತಮ್ಮ ಪ್ರೀತಿ ನಿಜವಾಗಿಯೂ ಎಷ್ಟು ಪ್ರಭಾವವಾಗಿರುತ್ತೆ ಅಥವಾ ಆಳವಾಗಿರುತ್ತೆ ಎಂಬುವುದನ್ನು ತಾವು ಕೂತ ಬೆಂಚು, ನಿಂತ ನೆಲ, ಓಡಾಡಿದ ಕಲ್ಲುಗಳು ಹೀಗೆ ತಾವೆಲ್ಲಿ ವಿಹರಿಸಿ ಬಂದಿರುತ್ತಾರೋ ಅಲ್ಲೆಲ್ಲ ತಮ್ಮ ಅಮರ ಪ್ರೇಮದ ಅಕ್ಷರಗಳನ್ನು ಮೂಡಿಸುತ್ತಾರೆ (ಇನ್ನೂ ಈ ಪ್ರತೀತಿಯನ್ನು ಮಂದುವರೆಸಿದ್ದಾರೆ).
ತನ್ನ ಹಾಗೂ ತನ್ನ ಪ್ರೇಮಿಯ ಹೆಸರು ಶಾಶ್ವತವಾಗಿರಲಿ ಎಂಬ (ಮೂಢ) ಭಾವನೆಯಿಂದ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಗೋಡೆಗಳ ಮೇಲೆ ತಮ್ಮ ಹೆಸರುಗಳನ್ನು ಪ್ರೇಮಕಾವ್ಯದಂತೆ ಮೂಡಿಸಿ ಬಂದಿರುತ್ತಾರೆ. ಅಬ್ಬಾ! ಇದು ಎಂಥಾ ಪ್ರೀತಿ ಎಂದು ಅದನ್ನು ನೋಡಿದವರಿಗೇ ಅರ್ಥವಾಗಬೇಕು (ತಿಳಿದರೆ ಮಾತ್ರ).
'ಜನ್ಮ ಜನ್ಮಕ್ಕೂ ನೀನೆ ನನ್ನ ಸಂಗಾತಿ', 'ನಿನ್ನನ್ನೇ ಪ್ರೀತಿಸುವ ಇಂತಿ ನಿನ್ನ ಪ್ರಿಯಕರ', 'ಹಲವು ದಿನಗಳ ಗೆಳೆಯಾ ಅಥವಾ ಗೆಳತಿ' ಹೀಗೆ ನಾನಾ ವಿಧಗಳಲ್ಲಿ ತಮ್ಮದೆಯಾದ ವಾಕ್ಯಗಳನ್ನು ಪ್ರೇಮದ ಸಂಕೇತದೊಂದಿಗೆ ಸ್ಥಳಗಳಲ್ಲಿ ಮೂಡಿಸಿರುತ್ತಾರೆ. 'ಇವರೇಕೆ ಹೀಗೆ ನನ್ನ ಮೇಲೆ ಮೂಡಿಸುತ್ತಾರೋ' ಎಂದು ಆ ಗೋಡೆಗಳು ತಮ್ಮಲ್ಲಿಯೇ ಗೊಣಕಿಕೊಳ್ಳುತ್ತಿರುತ್ತವೆ.
ಇದರಲಿ ಬಿಡಿ. ಇದು ಪ್ರೇಮಿಗಳ ಕಥೆಯಾಯಿತು. ಟೈಂ ಪಾಸ್ ಮಾಡುವವರ ಕಥೆಯು ಅದೇ ಆಗಿರುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ಅವರ ಮುಂದಿರುವ ಸೀಟು ಸ್ಪಲ್ಪ ಕಣ್ಣಾಡಿಸಿ ನೋಡಿ (ಸಾಧ್ಯವಾದರೆ, ಕಿಡಿಗಳು ಹಾಗೇ ಬಾತ್ ರೂಮ್ ಕೂಡಾ). ಎನೆಲ್ಲಾ ಗೀಚಿರ್ತಾರೆ. ಇಷ್ಟೇ ಆದ್ರೆ ಓಕೆ ಅನ್ನಬಹುದು. ಆದರೆ, ಅಲ್ಲಿ ಬರೆದಿರುವ ನಿಯಮಗಳನ್ನು 'ತಿದ್ದುಪಡಿ' ಮಾಡಿ ಅದರ ನೈಜ ಅರ್ಥವನ್ನು ಅನರ್ಥ ಬರುವಂತೆ ಮಾಡಿರುತ್ತಾರೆ. ಇದನ್ನು ಬರೆದ ಆ ಮಹಾಪುರುಷ ಎಷ್ಟು ಜಾಣನಿರಬಹುದು ಎಂದು ಅದನ್ನು ಓದಿದವರು ಮನಸ್ಸಿನಲ್ಲಿಯೇ ಮಂದಹಾಸ ಬೀರುವುದನ್ನು ನಾವು ಕಂಡಿದ್ದೇವೆ.
ಹಾಗೆ ಪಾರ್ಕ್‌ಗೆ ಬೆಳಗಿನ ಜಾವ ಜಾಗಿಂಗ್‌ಗೆ ಹೋದಾಗಲೊ ಅಥವಾ ಸಂಜೆ ವಾಕ್ ಹೋದಾಗಲೋ ಕೊಂಚ ಹೊತ್ತು ವಿಶ್ರಾಂತಿ ಪಡೆದುಕೊಳ್ಳಲು ಬೆಂಚುಗಳ ಮೇಲೆ ಕುಳಿತಾಗ ಅಲ್ಲಿಯು ಆ ಮಹಾಪುರುಷರ 'ಅಕ್ಷರ ಕೆತ್ತನೆ' ತಪ್ಪಿರುವುದಿಲ್ಲ. ಒಂದು ಒಳ್ಳೆಯ ವಾಕ್ಯವನ್ನು ಬರೆದಿದ್ದರೆ, ಪರವಾಗಿಲ್ಲ, ಅದರ ಬದಲು ಅವರ ಹೆಸರು ವಿಳಾಸ ಎಲ್ಲ ವಿವರ ನಮೂದಿಸಿ ಬಿಟ್ಟಿರ್ತಾರೆ. ಇನ್ನು ಕೆಲವರು ತಮ್ಮ ಭಾವಚಿತ್ರವನ್ನೆ ಬಿಡಿಸಿರುತ್ತಾರೆ! ಅದು ಅದ್ಭುತ ಕಲೆ.
ಇದು ಬಸ್ಸುಗಳನ್ನು ಬಿಡಲಿಲ್ಲ. ಒಮ್ಮೆ ಬಸ್ಸಿನಲ್ಲಿ ಹೋಗುವಾಗ ಅದರ ಸೀಟಿನ ಹಿಂದೆ ಹೀಗೆ ಬರೆಯಲಾಗಿತ್ತು- 'ಟಿಕೆಟ್ ರಹಿತ ಪ್ರಯಾಣ ಮಾಡಿದಲ್ಲಿ, ಅವರಿಗೆ 500 ರೂಪಾಯಿಗಳ ದಂಡ ವಿಧಿಸಲಾಗುವುದು' ಎಂದಿತ್ತು. ಇದನ್ನು ಯಾರೋ ಒಬ್ಬ, 'ಟಿಕೆಟ್ ಹಿತ ಪ್ರಯಾಣ ರೂಪಾ!' ಎಂದು ಅದರ ಮೂಲರೂಪವನ್ನು ಬದಲಾಯಿಸಿಬಿಟ್ಟಿದ್ದ. ಇನ್ನೊಬ್ಬ 'ಟಿಕೆಟ್ ಹಿತ ಪ್ರಯಾಣ ಮಾಡಿದಲ್ಲಿ, ಅವರಿಗೆ 500 ರೂಪಾಯಿ' ಎಂದಷ್ಟೇ ಬದಲಾಯಿಸಿದ್ದ. ನಿಜಕ್ಕೂ ಇಷ್ಟೊಂದು ಬುದ್ಧಿವಂತರು(!) ಇರ್ತಾರೆಯೇ ಎಂದುಕೊಂಡೆ.
ಕ್ಲಾಸ್ ರೂಮಿನಲ್ಲಿ ಬೆಂಚ್ ಮೇಲೆ ಕೂತಾಗಲು ಕೂಡ ಹಲವಾರು ಬಗೆಯ ವಿಶಿಷ್ಟ ಶೈಲಿಯ ಬರಹಗಳು ಕಾಣ ಸಿಗುತ್ತವೆ (ಕಾಲೇಜು ಜೀವನ ಅನುಭವಿಸಿದ್ದಲ್ಲಿ). ಪ್ರೊಪೆಸ್ಸರ್‌ಗಳ ಪಾಠ ಬೇಜಾರಾದಾಗ ಮುಂದಿರುವುದು ಒಂದೇ ಮಾರ್ಗ. ಅಕ್ಷರಗಳನ್ನು ಬರಿಯೋದು. ಚಿತ್ರ ಬಿಡಿಸೋದು. ಕೆಲವೊಮ್ಮೆ ಚಿತ್ರಗಾರರಿದ್ದರೆ, ಅದೇ ಪ್ರೊಫೆಸ್ಸರ್‌ಗಳು ಬೆಂಚ್ ಮೇಲೆ ಚಿತ್ರವಾಗಿ ಮೂಡಿಬಿಡುತ್ತಾರೆ! (ಆದ್ರೆ ನಾನೇನು ಅಂತಹ ಕಲಾವಿದನಲ್ಲ).
ಇದೆಲ್ಲಕ್ಕಿಂತಲೂ ಹಾಸ್ಟೇಲ್ ಗೋಡೆಗಳು ಇವಕ್ಕೆ ಅತಿಸೂಕ್ತ ಎಂದರೆ, ತಪ್ಪಾಗಲಾರದು. ಎಂತೆಂಥ ಬರಹಗಳು, ಒಂದೊಂದು ಅದ್ಭುತ ಮತ್ತು ಅಷ್ಟೇ ಹಾಸ್ಯಮಯವಾಗಿರುತ್ತವೆ. 'ನನ್ನನ್ನು ನೀವು ಭೇಟಿಯಾಗಬೇಕಿದ್ದರೆ, ಈ ನಂಬರ್‌ನ್ನು ಸಂಪರ್ಕಿಸಿ. ಎಂದು ಬರೆದು ಅವರ ವಿಳಾಸ ಕೂಡ ಬರೆದಿರ್ತಾರೆ' (ಇವರನ್ನು ನಾವ್ಯಾಕೆ ಸಂಪರ್ಕಿಸಬೇಕು. ಹೋಗ್ಲಿ ಯಾಕೆ ಫೋನ್ ಮಾಡಬೇಕು). 'ಇವರು ನನ್ನ ರೂಮ್ ಪಾರ್ಟ್ನರ್‌ಗಳು- ಮುಂದೆ ಅವರ ಹೆಸರು' (ಅವರನ್ನು ತೆಗೆದುಕೊಂಡು ನಾನೇನು ಮಾಡಲಿ).
ಹೀಗೆ ಬೆಂಚು ಬರಹದ ಬಗ್ಗೆ ಹೇಳುತ್ತಾ ಹೋದರೆ, ಅದು ನಿರಂತರ. ರಾಜ ಮಹಾರಾಜರು ತಮ್ಮ ಹೆಸರನ್ನು ಬರೆಸಲು ಈಗಿನಂತೆ ಕಂಪ್ಯೂಟರ್‌ಗಳು, ವೆಬ್‌ಸೈಟ್‌ಗಳು ಇಲ್ಲದ್ದರಿಂದ ಕಲ್ಲಿನ ಮೇಲೆ ಚಿತ್ರಕಾರರ ಮೂಲಕ ತಮ್ಮ ಹೆಸರನ್ನು ಬರೆಸುತ್ತಿದ್ದರು ಎಂಬುದನ್ನು ನಾವು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಅವರಂತೆಯೇ ನಮ್ಮ ಹೆಸರು ಕೆತ್ತನೆಯಲ್ಲಿ ಬಾರದಿದ್ದರೂ ಪರವಾಗಿಲ್ಲ. At least ಈ ಬರಹದ ಮೂಲಕವಾದರೂ, ಇಲ್ಲಿ ಒಡಮೂಡಲಿ ಎಂಬ ಭಾವನೆ ಈಗಿನ ಜನರದ್ದು. ಹೀಗಾಗಿ ತಾವು ಎಲ್ಲಿಗಾದರೂ ಭೇಟಿ ನೀಡಿದಾಗ ಅಥವಾ ಎಲ್ಲಿಯಾದರೂ ಕೂತಾಗ (ಖಾಲಿ) ಇಂತಹ ಕಾರ್ಯಕ್ಕೆ ಮುಂದಾಗುವುದು ಸಹಜ.