Sunday, September 23, 2007

ಅಕ್ಟೋಬರ್ 6, 2007 ರಂದು.........

ಪಾಕಿಸ್ತಾನ. ಇತ್ತೀಚಿನ ದಿನಮಾನಗಳಲ್ಲಿ ಪ್ರತಿನಿತ್ಯ ಒಂದಿಲ್ಲಾ ಒಂದು ದಾಳಿಗೆ ತುತ್ತಾಗುತ್ತಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಇದೆಲ್ಲಕ್ಕಿಂತ ಮಿಗಿಲಾಗಿ ಧಾರ್ಮಿಕ ತೀವ್ರವಾದವಂತೂ ದೇಶದ ನೆಮ್ಮದಿಯನ್ನೇ ಹಾಳು ಮಾಡಿದೆ. ಇದರಿಂದ ಅಲ್ಲಿನ ಸಾಮಾಜಿಕ ಜನಜೀವನ ಎಷ್ಟರ ಮಟ್ಟಿಗೆ ಕ್ಷಿಣಿಸಿರಬೇಕು ಎಂಬುವುದನ್ನು ನಾವು ಈ ಮೂಲಕವೇ ಊಹಿಸಿಕೊಳ್ಳಬಹುದು.ಅಕ್ಟೋಬರ್ 6, 2007 ಈ ದಿನ ಪಾಕಿಸ್ತಾನದಲ್ಲಿ ಭಾರೀ ಕುತೂಹಲವನ್ನೆ ಮೂಡಿಸಿದೆ. ಅಂದು ಮುಸ್ಲಿಂ ನಾಡಿನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿವೆ. ಇದಕ್ಕಾಗಲೇ ಅಲ್ಲಿನ ಚುನಾವಣೆ ಆಯೋಗವು ತನ್ನ ಅಧಿಸೂಚನೆಯನ್ನು ಹೊರಡಿಸಿದ್ದೂಯಾಗಿದೆ.

ಎಲ್ಲ ರಾಷ್ಟ್ರಗಳಲ್ಲಿ ಚುನಾವಣೆಗಳು ನಡೆಯುವುದು ಸಾಮಾನ್ಯ ಹಾಗೂ ಸಹಜವಾದ ವಿಷಯ. ಆದರೆ, ಇಲ್ಲಿಯ ಚುನಾವಣೆ ನಡೆಯುವುದಕ್ಕಿಂತ ಪೂರ್ವದಲ್ಲಿ ನಡೆಯುತ್ತಿರುವ ವಾದ-ವಿವಾದ, ಏಟಿಗೆ-ಏದುರೇಟು, ಮಾತಿನ ಚಕಮಕಿ, ರಾಜಕೀಯ ವೈಷಮ್ಯ, ಅಧಿಕಾರದ ದಾಹ, ಏಕಸ್ವಾಮತ್ವ, ನಿರಂಕುಶ ಪ್ರಭುತ್ವ, ಸರ್ವಾಧಿಕಾರ ಧೋರಣೆ ಹೀಗೆ ಹಲವಾರು ಅಂಶಗಳು ಇಲ್ಲಿ ಗಿರಕಿ ಹೊಡೆಯುತ್ತಿರುವುದು ಆ ನಾಡಿನ ಜನತೆಯ ನೆಮ್ಮದಿಯನ್ನು ಕಸಿದುಕೊಂಡಿವೆ.ಕಳೆದ ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ತಲೆದೂರಿದ್ದ ರಾಜಕೀಯ ಅಸ್ಥಿರತೆಯು, ತುರ್ತು ಪರಿಸ್ಥಿತಿಯನ್ನು ಹೇರುವ ಮಟ್ಟಕ್ಕೆ ಹೋಗಿತ್ತು. ಇಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾದ ಚುನಾವಣೆಗಳು ನಡೆಯುತ್ತವೆ ಎಂಬ ಭರವಸೆ ಇಲ್ಲದ ಕೆಲವು ರಾಜಕೀಯ ನಾಯಕರು ಇಂತಹ ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ಇದಕ್ಕೆ ತಮ್ಮ ಸರಕಾರ ಆಸ್ಪದ ನೀಡುವುದಿಲ್ಲ. ಇಲ್ಲಿ ನ್ಯಾಯಬದ್ಧವಾದ ಚುನಾವಣೆಗಳನ್ನು ನಡೆಸುತ್ತೇವೆ ಎಂದು ಪ್ರಧಾನಮಂತ್ರಿ ಶೌಖತ್ ಅಜಿಜ್ ಅವರು ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದರು.

ಮುಷರ್ರಫ್ V/s ಷರೀಷ್
ಪಾಕಿಸ್ತಾನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಹಾಗೂ ದೇಶಭ್ರಷ್ಟ ಆರೋಪದ ಮೇಲೆ ಕಳೆದ ಏಳು ವರ್ಷಗಳ ಹಿಂದೆ ಗಡೀಪಾರಾಗಿರುವ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ನಡುವೆ ಶೀತನ ಸಮರವಾಗುತ್ತಿರುವುದು ಗೋಚರವಾಗುತ್ತಿದೆ. ಮುಂಬರಲಿರುವ ಅಕ್ಟೋಬರ್ 6 ರ ಚುನಾವಣೆಯಲ್ಲಿ ಗಡೀಪಾರಾಗಿರುವ ಷರೀಫ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬುದು ಮುಷರ್ರಫ್ ಛಲ ಸಾಧಿಸುತ್ತಿದ್ದಾರೆ. ಆದರೆ, ಇದರಲ್ಲಿ ಸ್ಪರ್ಧಿಸಿಯೇ ತೀರುತ್ತೇನೆ ಎಂಬುದು ಷರೀಫ್ ಅವರ ಮರು ಉತ್ತರ.

ಆದರೆ, ಗಡಿಪಾರಾಗಿ ಶಿಕ್ಷೆ ಎದುರಿಸುತ್ತಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಸಹೋದರ ಸ್ವದೇಶಕ್ಕೆ ಮರಳಲು ಅವಕಾಶ ಕಲ್ಪಿಸುವಂತೆ ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಿದ ಸರ್ವೋಚ್ಛ ನ್ಯಾಯಾಲಯ ಅವರಿಬ್ಬರಿಗೂ ಇಲ್ಲಿ ನೆಲೆಸಲು ಅವಕಾಶವಿದೆ ಎಂದು ನ್ಯಾಯಾಲಯವು ತಿಳಿಸಿತ್ತು. ಇದನ್ನೇ ಪ್ರಮುಖ ಆಧಾರವಾಗಿಟ್ಟುಕೊಂಡು ನವಾಜ್ ಷರೀಫ್ ಅವರು ಪಾಕಿಸ್ತಾನಕ್ಕೆ ಮರಳಲು ಸಿದ್ಧರಾದರು. ಕೊನೆಗೂ ಅವರು ಸೆಪ್ಟೆಂಬರ್ 8 ರಂದು ಪಾಕಿಸ್ತಾನಕ್ಕೆ ಬರುವ ಇಂಗಿತವನ್ನು ವ್ಯಕ್ತಪಡಿಸಿದರು.

ಆದರೆ, ತಾನೊಂದು ಬಗೆದರೆ, ದೈವವೊಂದು ಬಗೆದಂತೆ ಎಂಬ ನಾಣ್ಣುಡಿಯಂತೆ, ಸೆಪ್ಟೆಂಬರ್ 10 ರಂದು ಪಾಕಿಸ್ತಾನಕ್ಕೆ ಬರಲು ಪಿಎಂಎಲ್-ಎನ್ ನಾಯಕ ನವಾಜ್ ಷರೀಫ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡರು. ಆದರೆ, ಅವರೊಟ್ಟಿಗೆ ಅವರ ಸಹೋದರ ಶಹ್‌ಬಾಜ್ ಷರೀಫ್, ಇತರ ಪತ್ರಕರ್ತರು, ವಕೀಲರು ಕೂಡ ಆಗಮಿಸಲು ಒಂದು ತಂಡವೇ ರೆಡಿಯಾಯಿತು. ಇನ್ನೇನು ದಿನಗಳು ಉರುಳುತ್ತಾ ಹೋದ ಹಾಗೆ ಪಾಕಿಸ್ತಾನದಲ್ಲಿ ಆತಂಕಗಳು ಮರೆಮಾಡಲು ಶುರುವಾಯಿತು.1999 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ನವಾಜ್ ಷರೀಫ್ ಹಾಗೂ ಅವರ ಸಹೋದರರಿಬ್ಬರನ್ನೂ ಜನರಲ್ ಪರ್ವೇಜ್ ಮುಷರ್ರಫ್ ಅವರು ಹತ್ತು ವರ್ಷಗಳ ಕಾಲ ಗಡೀಪಾರು ಮಾಡಿದ್ದರು. ಆದರೆ, ಅವರು ದೇಶಬಿಟ್ಟು ಹೊರಡುವ ಪೂರ್ವದಲ್ಲಿ ಸ್ವದೇಶಕ್ಕೆ ಹತ್ತು ವರ್ಷಗಳ ಕಾಲ ಹಿಂದಿರುಗುವುದಿಲ್ಲ ಎಂಬ ಒಡಂಬಡಿಕೆಗೆ ಸಹಿ ಹಾಕಿದ್ದರು. ಹೀಗಾಗಿ ಅವರು ಸ್ವದೇಶಕ್ಕೆ ಮರಳಲು ನಾವು ಬಿಡುವುದಿಲ್ಲ ಎಂಬುವುದ ಪಾಕ್ ಅಧ್ಯಕ್ಷ ಮುಷರ್ರಫ್ ಅವರ ವಾದ. ಇದಕ್ಕೆ ಸೌದಿ ಅರೇಬಿಯಾ ಹಾಗೂ ದುಬೈಗಳಿಂದಲೂ ಜನರಲ್ ಅವರಿಗೆ ಬೆಂಬಲವಿತ್ತು ಎಂಬುವುದನ್ನು ಬೇರೆಯಾಗಿ ಹೇಳಬೇಕಿಲ್ಲ.

ಇಡೀ ಪ್ರಪಂಚವು ಸೆಪ್ಟೆಂಬರ್ 10 ರಂದು ಮುಸ್ಲಿಂ ರಾಷ್ಟ್ರದತ್ತ ಗಮನ ಹರಿಸಿತು. ಅಂದು ಬೆಳಗ್ಗೆ 9.15 ಕ್ಕೆ ನವಾಜ್ ಷರೀಫ್ ಅವರು ತಮ್ಮ ಕುಟುಂಬ, ಮಿತ್ರರು, ಪಕ್ಷದ ನಾಯಕರುಗಳೊಂದಿಗೆ ಇಸ್ಲಾಮಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ಕೇಂದ್ರಕ್ಕೆ ಆಗಮಿಸಿದರು. ಅವರನ್ನು ಸ್ವೀಕರಿಸಲು ಹಲವಾರು ಮಂದಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನಿಟ್ಟುಸಿರು ಬಿಟ್ಟು ಕಾಯುತ್ತಿದ್ದರು. ಆದರೆ, ಆದದ್ದೇನು ಗೊತ್ತೆ. ಮತ್ತೆ ಅವರನ್ನು ಬಂಧಿಸಿ ಸೌದಿ ಅರೇಬಿಯಾಗೆ ಹಸ್ತಾಂತರ.ಕಳೆದ ಏಳು ವರ್ಷಗಳಿಂದ ತಾಯ್ನಾಡಿನಿಂದ ದೂರ ಉಳಿದಿದ್ದ ಷರೀಫ್ ಮತ್ತೊಮ್ಮೆ ಸೌದಿ ಅರೇಬಿಯಾಗೆ ಹಸ್ತಾಂತರಿಸಲಾಯಿತು. ಇದರಿಂದ ಬೇಸತ್ತ ಷರೀಫ್ ಅವರು, ನನ್ನ ಬಂಧನಕ್ಕೆ ಮುಷರ್ರಫ್ ಅವರ ಅಹಂಕಾರವೇ ಕಾರಣೆ ಎಂದು ಕಿಡಿ ಕಾರಿದರು. ಪಾಕಿಸ್ತಾನದಲ್ಲಿಯೂ ಕೂಡ ಈ ಕುರಿತು ಹಲವಾರು ಪ್ರತಿಭಟನೆಗಳನ್ನು ಅವರ ಬೆಂಬಲಿಗರೇ ಕೈಗೊಂಡರು. ಆದರೆ ಅದರಿಂದ ಏನು ಪ್ರಯೋಜನವಾಗಲಿಲ್ಲ.

ಭುಟ್ಟೊರೊಂದಿಗೆ ಗುಟ್ಟು ಮಾತುಕತೆ
ಮುಷರ್ರಫ್ ಅವರು ತಾವು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೊರಟಿದ್ದಾರೆ ಎಂಬುವುದಕ್ಕೆ ಕೆಲವು ಅಂಶಗಳು ನಮ್ಮ ಕಣ್ಣಿಗೆ ಕಾಣಸಿಗುತ್ತವೆ. ಮತ್ತೊಮ್ಮೆ ಅಧ್ಯಕ್ಷರಾಗಲೇಬೇಕು ಎಂಬ ಕಾರಣದಿಂದ ಅವರು ಮಾಜಿ ಪ್ರಧಾನಮಂತ್ರಿ ಹಾಗೂ ಗಡೀಪಾರಾಗಿರುವ ಪಿಪಿಪಿಯ ಅಧ್ಯಕ್ಷೆ ಬೆನಜಿರ್ ಭುಟ್ಟೊ ಅವರೊಂದಿಗೆ ಇಂಗ್ಲೆಂಡ್‌ನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ ಅಂಬೋಣ.

ಹಾಗಾದರೆ, ಈ ಮಾತುಕತೆಯಲ್ಲಿ ಆಗಿದ್ದೇನು ಎಂಬುವುದಕ್ಕೆ ಪುಷ್ಠಿ ನೀಡುವುದಕ್ಕೆ ಪ್ರಬಲ ಸಾಕ್ಷಿಗಳು ಮಾಧ್ಯಮಗಳಿಗೆ ಬಹುಶಃ ನಮಗೆ ದೊರಕದೆ ಇರಬಹುದು.ಆದರೂ ಮಾಧ್ಯಮಗಳು ಕೆಲವು ಮಾಹಿತಿಗಳನ್ನು ಹೆಕ್ಕಿ ತೆಗೆದಿದ್ದು, ತಮ್ಮನ್ನು ಸೇನಾಸಮವಸ್ತ್ರದಲ್ಲಿಯೇ ಮರು ಆಯ್ಕೆ ಮಾಡಬೇಕು. ಒಂದು ವೇಳೆ ತಮಗೆ ರಾಷ್ಟ್ರಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಮರು ನೇಮಕ ಮಾಡುವಲ್ಲಿ ನೆರವು ನೀಡಿದ್ದಲ್ಲಿ ಭುಟ್ಟೊ ಮೇಲಿರುವ ಗಡೀಪಾರನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ಮುಷರ್ರಫ್ ಮಾತು ನೀಡಿದ್ದರಂತೆ ಎಂಬುದು ವದಂತಿ.

ಆದರೆ, ಇದು ನಿಜವೇ ಆಗಿರಬಹುದಲ್ಲ ಎಂಬುವುದನ್ನು ಜಾಣ ಓದುಗರಿಗೆ ಬೇರೆ ಬಿಡಿಸಿ ಹೇಳಬೇಕಿಲ್ಲ.ಅಧಿಕಾರ ಹಂಚಿಕೆ ಕುರಿತು ಭುಟ್ಟೊ ಹಾಗೂ ಮುಷರ್ರಫ್ ಅವರ ನಡುವೆ ಮಾತುಕತೆಗಳು ನಡೆದಿದ್ದು, ಇದು ಮುಂದಿನ ಸಾರ್ವತ್ರಿಕ ಚುನಾವಣೆಯ ಮೇಲೆ ಅವಲಂಬಿತವಾಗಿದೆ ಎಂದು ಪ್ರಧಾನಮಂತ್ರಿ ಶೌಖತ್ ಅಜಿಜ್ ವಿವರಣೆ ನೀಡಿದ್ದರು. ಆದರೆ ಯಾರು ಏನೇ ಹೇಳಿಕೆಗಳನ್ನು ನೀಡಿದರೂ, ಚುನಾವಣೆಯಲ್ಲಿ ಏನಾಗುತ್ತೆ ಎನ್ನುವುದನ್ನು ನಿರ್ಧರಿಸುವುದು ಅಲ್ಲಿನ ಪ್ರಜೆಗಳೇ.

ಮುಷ್‌ಗೆ ಅಡ್ಡಿಯಾಗಿರುವ ಸೇನಾಸಮವಸ್ತ್ರ?

ಅಕ್ಟೋಬರ್ ಆರು ಇದು ಪಾಕಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವ ಪರ್ವ ಕಾಲ ಎಂದು ಹೇಳಬೇಕು. ಆದರೆ, ಮುಷರ್ರಫ್ ಅವರು ತಾವು ಧರಿಸಿರುವ ಸೇನಾ ಸಮವಸ್ತ್ರದ ಕಾಲಾವಧಿಯು ನವೆಂಬರ್ 15 ರಂದು ಮುಕ್ತಾಯಗೊಳ್ಳುತ್ತಿದೆ. ಆದರೆ ವಿಶಿಷ್ಟವೆಂದರೆ, ಅಕ್ಟೋಬರ್ 6 ರ ಚುನಾವಣೆಯಲ್ಲಿ ಅವರು ಮರು ಆಯ್ಕೆ ಬಯಸಿ ಮತ್ತೊಮ್ಮೆ ಸಾರ್ವಭೌಮ ಅಧಿಕಾರ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯವೆ ಎಂಬುದು ಈಗ ಪಾಕಿಸ್ತಾನದಲ್ಲಿ ಬಹುಚರ್ಚಿತವಾಗುತ್ತಿರುವ ವಿಷಯವಾಗಿದೆ.

ಮುಷರ್ರಫ್ ಅವರು ಈಗಾಗಲೇ ಸೇನಾಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವುದು ಸಾರ್ವತ್ರಿಕ ಸತ್ಯವಾದ ಮಾತು. ಅದರೊಟ್ಟಿಗೆ ದೇಶದ ಅಧ್ಯಕ್ಷ ಸ್ಥಾನದಲ್ಲಿ ಇನ್ನೂ ಇದ್ದಾರೆ. ಆದರೆ, ಸಮಸ್ಯೆ ಎದುರಾಗಿರುವುದೇ ಇಲ್ಲಿ. ಸೇನಾ ಸಮವಸ್ತ್ರದಲ್ಲಿ ದೇಶದ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಇಚ್ಛಿಸಿದಲ್ಲಿ ತಾವು ಅಸೆಂಬ್ಲಿಯಿಂದ ಹಾಗೂ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ವಿರೋಧ ಪಕ್ಷಗಳು ಕಟ್ಟುನಿಟ್ಟಾಗಿ ಹೇಳಿವೆ.ತಾವು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುವುದು ಅಧ್ಯಕ್ಷರ ವಾದ.

ಇದಕ್ಕೆ ನಾವು ಸಿದ್ಧರಿಲ್ಲ ನೀವು ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ಮರು ಆಯ್ಕೆ ಬಯಸಿ ಚುನಾವಣೆಯನ್ನು ಎದುರಿಸಿ ಎಂಬುದು ವಿರೋಧ ಪಕ್ಷಗಳು ಮೇಲಿಂದ ಮೇಲೆ ಅಧ್ಯಕ್ಷರಿಗೆ ಚುರುಕು ಮುಟ್ಟಿಸುತ್ತಿವೆ. ಈ ರೀತಿಯ ಹಲವಾರು ತದ್ವಿರುದ್ಧ ಮಾತಿನ ಚಕಮಕಿಗಳು ಈಗಲೇ ನಡೆಯುತ್ತಿವೆ. ಆದರೆ, ಅಕ್ಟೋಬರ್ 6 ರಂದು ಏನಾಗುತ್ತೆ? ಚುನಾವಣೆಯಲ್ಲಿ ಮುಷರ್ರಫ್ ಸ್ಪರ್ಧಿಸುವರೆ? ಸ್ಪರ್ಧಿಸಿದಲ್ಲಿ ಗೆಲುವು ಸಾಧಿಸುವರೆ? ಅಥವಾ ಅದಕ್ಕೂ ಮುಂಚಿತವಾಗಿ ವಿರೋಧ ಪಕ್ಷಗಳ ಹೇಳಿಕೆಗೆ ತಲೆಬಾಗುವರೆ? ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವರೆ? ಈ ರೀತಿಯ ಹಲವಾರು ಉತ್ತರಗಳಿಗೆ ಅಕ್ಟೋಬರ್ 6........

No comments: